ಶಿಮ್ಲಾ: ಕಾರ್ಗಿಲ್ ಯುದ್ಧದ ಹೀರೊ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ತಾಯಿ ಕಮಲ್ ಕಾಂತ್ ಬಾತ್ರಾ (77) ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ಕಮಲ್ ಕಾಂತ್ ಬಾತ್ರಾ ಅವರು ನಿಧನರಾಗಿದ್ದು, ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಮಲ್ ಕಾಂತ್ ಬಾತ್ರಾ ಅವರ ನಿಧನದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಸಂತಾಪ ಸೂಚಿಸಿದ್ದಾರೆ. “ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ತಾಯಿ ಕಮಲ್ ಕಾಂತ್ ಬಾತ್ರಾ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ದುಃಖವಾಯಿತು. ಅವರ ಕುಟುಂಬಸ್ಥರು ಹಾಗೂ ಆಪ್ತರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಕಮಲ್ ಕಾಂತ್ ಬಾತ್ರಾ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಮ್ ಆದ್ಮಿ ಪಕ್ಷ ಸೇರಿದ್ದ ಕಮಲ್ ಕಾಂತ್ ಬಾತ್ರಾ ಅವರು ಹಮೀರ್‌ಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ, ಚುನಾವಣೆ ಬಳಿಕ ಪಕ್ಷದ ಸಂಘಟನಾ ಮಾದರಿಯನ್ನು ಇಷ್ಟಪಡದ ಅವರು ಆಪ್ ಅನ್ನು ತೊರೆದಿದ್ದರು. ಇದಾದ ಬಳಿಕ ಕಮಲ್ ಕಾಂತ್ ಬಾತ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದರು. “ನರೇಂದ್ರ ಮೋದಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಬೇಕು. ರಾಷ್ಟ್ರೀಯವಾದ ಹಾಗೂ ದೇಶಭಕ್ತಿ ಅವರ ಪರಮ ಧ್ಯೇಯವಾಗಿರಬೇಕು” ಎಂದು ಹೇಳಿದ್ದರು.