ಬೆಂಗಳೂರು : “ಲೋಕಸಭೆ ಚುನಾವಣೆ ಸಂಬಂಧ ಇಂದು ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಚರ್ಚೆ ಮಾಡಲಾಗಿದ್ದು, 75%ರಷ್ಟು ಕ್ಷೇತ್ರಗಳಲ್ಲಿ ಒಬ್ಬರ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸಭೆ ಬಳಿಕ ಮಾತನಾಡಿದ ಅವರು “ಸ್ಕ್ರೀನಿಂಗ್ ಕಮಿಟಿ ಸಭೆ ಮುಕ್ತಾಯವಾಗಿದ್ದು, ಲೋಕಸಭೆ ಅಭ್ಯರ್ಥಿಗಳ ಹೆಸರುಗಳನ್ನು ಚರ್ಚಿಸಿದ್ದೇವೆ. ಇದೇ 14ರ ನಂತರ ದೆಹಲಿಯಲ್ಲಿ ನಡೆಯುವ ಸಭೆಗೆ ನಾನು ಹಾಗೂ ಮುಖ್ಯಮಂತ್ರಿಗಳು ಹೋಗಿ ಪಟ್ಟಿಯನ್ನು ಅಂತಿಮಗೊಳಿಸುತ್ತೇವೆ ಎಂದು ಹೇಳಿದರು.
ಬಹುತೇಕ 75% ಕ್ಷೇತ್ರಗಳಲ್ಲಿ ಒಬ್ಬರ ಹೆಸರು ಶಿಫಾರಸ್ಸು ಮಾಡಿದ್ದೇವೆ” ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿ, ಧರ್ಮ ರಕ್ಷಣೆ ಮಾಡಿಕೊಂಡು ಸಂವಿಧಾನದ ಆಶಯ ಕಾಪಾಡಿಕೊಂಡು ನಡೆಯಲಿದೆ. ಇದು ನಾಗರಿಕತೆ ನೀಡುವ ಕ್ರಮವಾಗಿದೆಯೇ ಹೊರತು, ಪೌರತ್ವ ಕಸಿಯುವುದಿಲ್ಲ ನಾನು ಅದಕ್ಕೆ ಬದ್ಧನಾಗಿದ್ದೇನೆ. ಸಿಎಎ ಜಾರಿ ಮಾಡುತ್ತಿರುವ ಸಮಯ ಸರಿಯಾಗಿಲ್ಲ” ಎಂದರು.
ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಸಂವಿಧಾನ ಬದಲಿಸಲು ಬಿಜೆಪಿ 400 ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ನೀಡಿರುವ ಹೇಳಿಕೆ ಖಂಡನೀಯ. ಬಿಜೆಪಿ ಅವರ ವಿರುದ್ಧ ಯಾವ ಕ್ರಮ ಜರುಗಿಸಿದೆ. ಅವರನ್ನು ಉಚ್ಚಾಟಿಸಿದ್ದಾರಾ? ಇದು ಬಿಜೆಪಿಯ ಧ್ವನಿ. ರಾಜ್ಯ ಹಾಗೂ ದೇಶದಲ್ಲಿ ಇದನ್ನು ಖಂಡಿಸಿ, ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಬೇಕು” ಎಂದು ಹೇಳಿದರು.