
ಕರ್ನಾಟಕದಲ್ಲಿ ಸೈಬರ್ ಅಪರಾಧಿಗಳ ಅಬ್ಬರ ಮುಂದುವರಿದಿದ್ದು, ‘ಡಿಜಿಟಲ್ ಅರೆಸ್ಟ್’ ಎಂಬ ಹೊಸ ಮಾದರಿಯ ವಂಚನೆಗೆ ರಾಜ್ಯದ ಜನರು ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಕುರಿತು ಗೃಹ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯು ಬೆಚ್ಚಿಬೀಳಿಸುವಂತಿದೆ. ಕಳೆದ ಮೂರು ವರ್ಷಗಳಲ್ಲಿ ವಂಚಕರು ಜನರಿಂದ ಬರೋಬ್ಬರಿ 468 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಹೇಳುತ್ತಿವೆ.
ಗೃಹ ಇಲಾಖೆಯ ವರದಿಯ ಪ್ರಕಾರ, 2023ರಿಂದ 2026ರ ಫೆಬ್ರವರಿ ಅವಧಿಯಲ್ಲಿ ಒಟ್ಟು 1,695 ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಕೇವಲ 196 ಪ್ರಕರಣಗಳಿದ್ದವು, ಆದರೆ 2024ರಲ್ಲಿ ಈ ಸಂಖ್ಯೆ 1,129ಕ್ಕೆ ಏರುವ ಮೂಲಕ ಸೈಬರ್ ದಾಳಿಯ ತೀವ್ರತೆಯನ್ನು ಎತ್ತಿ ತೋರಿಸಿದೆ. 2025ರಲ್ಲಿಯೂ 345 ಪ್ರಕರಣಗಳು ದಾಖಲಾಗಿದ್ದು, 215 ಕೋಟಿ ರೂಪಾಯಿಗೂ ಅಧಿಕ ಹಣ ವಂಚಕರ ಪಾಲಾಗಿದೆ. 2026ರ ಆರಂಭದ ಎರಡು ತಿಂಗಳಲ್ಲೇ ಈಗಾಗಲೇ 25 ಪ್ರಕರಣಗಳು ದಾಖಲಾಗಿದ್ದು, 11 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಜನರು ಕಳೆದುಕೊಂಡಿದ್ದಾರೆ.
ಕಾನೂನು ಜಾರಿ ಸಂಸ್ಥೆಗಳು ಅಥವಾ ಸಿಬಿಐ, ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ, ನಿಮ್ಮ ಮೇಲೆ ಕ್ರಿಮಿನಲ್ ಪ್ರಕರಣವಿದೆ ಎಂದು ಹೆದರಿಸಿ, ವಿಡಿಯೋ ಕಾಲ್ ಮೂಲಕ ನಿಮ್ಮನ್ನು ಮನೆಯಲ್ಲೇ ಇರುವಂತೆ ಮಾಡುವ ಈ ತಂತ್ರಕ್ಕೆ ವಿದ್ಯಾವಂತರೂ ಬಲಿಯಾಗುತ್ತಿರುವುದು ವಿಷಾದನೀಯ. ಪೊಲೀಸರು ಮತ್ತು ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ, ಭಯದ ವಾತಾವರಣ ಸೃಷ್ಟಿಸುವ ವಂಚಕರ ಜಾಲಕ್ಕೆ ಸಿಲುಕಿ ಜನರು ತಮ್ಮ ಜೀವನದ ಉಳಿತಾಯವನ್ನೆಲ್ಲ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಗೃಹ ಇಲಾಖೆ ಈಗ ವಿಶೇಷ ಕಾರ್ಯಾಚರಣೆಗೆ ಮುಂದಾಗಿದೆ.




