ಬೆಂಗಳೂರು : ಮೇರುನಟನಾಗಿ, ಹೆಮ್ಮೆಯ ಕನ್ನಡಿಗನಾಗಿ ಬಾಳಿ ಬದುಕಿದ ವರನಟ ದಿವಂಗತ ಡಾ. ರಾಜ್‌ಕುಮಾರ್ ಅವರಿಗೆ ಇಂದು 95ನೇ ಜನುಮ ದಿನದ ಸಂಭ್ರಮ. ಡಾ.ರಾಜಕುಮಾರ್ ಜಯಂತಿ ಮತ್ತು ಪುಣ್ಯಸ್ಮರಣೆ ದಿನ ರಾಜ್ ಅಭಿಮಾನಿಗಳು ಬಗೆ ಬಗೆ ಕಾರ್ಯಕ್ರಮಗಳ ಮೂಲಕ ಅವರನ್ನು ಮತ್ತೆ ನೆನಪಿಸಿಕೊಳ್ಳುತ್ತಾರೆ. ಈಗಾಗಲೇ ದೊಡ್ಮನೆ ಕುಟುಂಬ ರಾಜ್ ಕುಮಾರ್ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.
ಬದುಕಿದ್ದಾಗ ನೇತ್ರದಾನದ ಮೂಲಕ ಜಾಗೃತಿ ಮೂಡಿಸಿದ್ದ ರಾಜ್‌ಕುಮಾರ್, ತಮ್ಮ ನಿಧನದ ಬಳಿಕ ಕಣ್ಣುಗಳನ್ನು ದಾನ ಮಾಡಿದ್ದರು. ಈಗ ಪ್ರತಿ ವರ್ಷದಂತೆ, ಸಮಾಧಿ ಬಳಿ ನೇತ್ರದಾನ ನೋಂದಣಿ, ರಕ್ತದಾನ, ಅನ್ನದಾನದ ಕಾರ್ಯಗಳು ನಡೆಯಲಿವೆ. ಪುಣ್ಯಭೂಮಿಗೆ ಬರುವ ಅಭಿಮಾನಿಗಳಿಗೆ ಅಭಿಮಾನಿಗಳಿಂದಲೇ ಅನ್ನದಾನ ನೆರವೇರಲಿದೆ. ಅಷ್ಟೇ ಅಲ್ಲ ಬೆಂಗಳೂರಿನ ಪ್ರತಿ ಗಲ್ಲಿ ಗಲ್ಲಿಗಳಲ್ಲಿರುವ ಡಾ. ರಾಜ್ ಪ್ರತಿಮೆಗಳಿಗೂ ಇಂದು ವಿಶೇಷ ಅಲಂಕಾರ ಆಗುತ್ತಿದೆ. ಜತೆಗೆ ಅನ್ನ ಸಂತರ್ಪಣೆಯಂಥ ಕಾರ್ಯಕ್ರಮಗಳು ನಡೆಯಲಿವೆ.
ಇದೀಗ ರಾಘವೇಂದ್ರ ರಾಜ್‌ಕುಮಾರ್ ಮಾಧ್ಯಮದ ಜತೆ ಮಾತನಾಡಿ ʻವಿಶೇಷ ಅಂದರೆ ಇಂದು ಸ್ವಾತಿ ನಕ್ಷತ್ರ. ಅವರು ಹುಟ್ಟಿದ ದಿನವೂ ಇದೇ ಬಂದಿತ್ತು. ಅಭಿಮಾನಿಗಳ ಪ್ರೀತಿ ನಮ್ಮ ಮೇಲೆ ಇದೆ. ಜನರ ಜೈಕಾರವನ್ನ ಅಪ್ಪಾಜಿ ಖುಷಿ ಪಡತ್ತಿದ್ದರು. ಅಪ್ಪಾಜಿ ಆಶೀರ್ವಾದ ಎಲ್ಲರ ಮೇಲಿದೆ. ರಾಜ್ ಇಲ್ಲ ಎನ್ನುವುದಕ್ಕೆ ಕಾರಣವೇ ಇಲ್ಲ. ಇಂದಿಗೂ ನಾನು ಅಪ್ಪಾಜಿ ಅವರ ಫೋಟೊ ನೋಡಿಯೇ ದಿನ ಶುರು ಮಾಡುವುದುʼʼ ಎಂದರು.