ಹಾವೇರಿ ಲೋಕಸಭೆ ಚುನಾವಣಾ ಕಣ ಈ ಬಾರೀ ತೀವ್ರ ಕುತೂಹಲ ಕೆರಳಿಸಿದೆ. ಹಾಲಿ ಸಂಸದ ಶಿವಕುಮಾರ್ ಉದಾಸಿ ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳು ಹುಟ್ಟಿಕೊಂಡಿದ್ರು. ಅದರಲ್ಲೂ ಪ್ರಮುಖವಾಗಿ ಮಾಜಿ ಡಿಸಿಎಂ ಈಶ್ವರಪ್ಪ ಪುತ್ರ ಕಾಂತೇಶ್ ಟಿಕೆಟ್ ಬಯಸಿ ಪ್ರಮುಖವಾಗಿ ಓಡಾಡಿದ್ರು. ಆದ್ರೆ ಆಗಿದ್ದೇ ಬೇರೆ.. ಬೇಡ ಬೇಡ ಅಂದ್ರೂ ಹೈಕಮಾಂಡ್ ಬಸವರಾಜ್ ಬೊಮ್ಮಾಯಿಗೆ ಟಿಕೆಟ್ ನೀಡಿ ಕಣಕ್ಕೆ ಇಳಿಸಿದೆ. ಇದರಿಂದ ಹಾವೇರಿ ಬಿಜೆಪಿಯಲ್ಲಿ ಭಿನ್ನಮತ ಹೊಗೆಯಾಡುತ್ತಿದೆ.
ಬಿಜೆಪಿ ಒಡಕಿನ ಲಾಭ ಪಡೆದು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಣತಂತ್ರ ಮಾಡಿದ್ದಾರೆ. ಕಳೆದ ರಾತ್ರಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮಾಜಿ ಮಂತ್ರಿ ಆರ್ ಶಂಕರ್ ಭೇಟಿ ನೀಡಿ ಸಿದ್ದರಾಮಯ್ಯ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಬೊಮ್ಮಾಯಿ ಸೋಲಿಸೋದಕ್ಕೆ ಏನೆಲ್ಲಾ ರಣತಂತ್ರ ಮಾಡಬಹುದು ಎಂಬ ಬಗ್ಗೆ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಹೊಸ ಮುಖ ಆನಂದಗಡ್ಡದೇವಮಠ ಗೆಲ್ಲಿಸಲು ಗೇಮ್ ಪ್ಲಾನ್ ಮಾಡಿದ್ದಾರೆ.
ರಾಣೆಬೆನ್ನೂರಿನ ಮಾಜಿ ಶಾಸಕ ಆರ್ ಶಂಕರ್.. ತಮಗೆ ಬಿಜೆಪಿ ಮಾಡಿರುವ ಅನ್ಯಾಯದಿಂದ ಒಳಗೊಳಗೆ ಕುದಿಯುತ್ತಿದ್ದಾರೆ. ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಸಿಗೋ ಅವಕಾಶಕ್ಕಾಗಿ ಕಾಯ್ತಿದ್ದಾರೆ. ಇದೀಗ ಅವಕಾಶ ಒದಗಿ ಬಂದಂತೆ ಕಾಣ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕುರುಬ ಸಮುದಾಯದ ಮುಖಂಡ ಆರ್ ಶಂಕರ್ ಯಾವ ರೀತಿಯ ಪರಿಣಾಮ ಬೀಡಬಹುದು. ಬೊಮ್ಮಾಯಿ ಸೋಲಿಗೆ ಕಾರಣವಾಗಬಹುದಾ ಎಂಬ ಕುತೂಹಲ ಈಗ ಎಲ್ಲರಲ್ಲಿದೆ.