ನಂದಿನಿ ಹಾಲು ಉತ್ಪನ್ನಗಳಿಂದ ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಹೆಸರುವಾಸಿಯಾದ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತೊಂದು ಹೆಜ್ಜೆ ಮುಂದೆಯಿಟ್ಟಿದ್ದು, ವಿಶ್ವದೆಲ್ಲೆಡೆ ‘ನಂದಿನಿ’ ಕಂಪು ಪಸರಿಸಲು ಹೊರಟಿದೆ.
ಹೌದು… ಕರ್ನಾಟಕ ಹಾಲು ಒಕ್ಕೂಟ ಹೊಸ ಸಾಹಸಕ್ಕೆ ಕೈ ಹಾಕಿದೆ. ಕರ್ನಾಟಕ ಹಾಲು ಒಕ್ಕೂಟ, ಜೂನ್ನಲ್ಲಿ ನಡೆಯಲಿರುವ T20 ಕ್ರಿಕೆಟ್ ವಿಶ್ವಕಪ್ನಲ್ಲಿ ಪ್ರಾಯೋಜಕತ್ವ ಪಡೆಯಲು ಮುಂದಾಗಿದೆ. ಒಂದು ಅಥವಾ ಹೆಚ್ಚಿನ ತಂಡಗಳಿಗೆ ಪ್ರಾಯೋಜಕತ್ವದ ಅವಕಾಶ ಪಡೆಯಲು ಸ್ಪರ್ಧಿಸುತ್ತಿದೆ.
ವರದಿಗಳ ಪ್ರಕಾರ, ಕೆಎಂಎಫ್ ಈಗಾಗಲೇ ಇದಕ್ಕೆ ಟೆಂಡರ್ ಅನ್ನು ಬಿಡುಗಡೆ ಮಾಡಿದೆ. ಐಸಿಸಿ ಟಿ20 ವಿಶ್ವಕಪ್ 2024 ರಲ್ಲಿ ಭಾಗವಹಿಸುವ ಒಂದು ಅಥವಾ ಹಲವಾರು ತಂಡಗಳ ಲೀಡ್ ಆರ್ಮ್ ಜೆರ್ಸಿಯ ತೋಳಿನ ಮೇಲೆ ನಂದಿನಿ ಲೋಗೋವನ್ನು ಪ್ರಚಾರ ಮಾಡಲು ಕೆಎಂಎಫ್ ಸ್ಥಂಸ್ಥೆ ಟೆಂಡರ್ ಕರೆದಿದೆ. ಆಸಕ್ತಿ ಹೊಂದಿರುವ ಕಂಪನಿಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.
ನಂದಿನಿ ಬ್ರ್ಯಾಂಡ್ ಈ ಹಿಂದೆ ಇತರ ಕ್ರೀಡೆಗಳಿಗೆ ಪ್ರಾಯೋಜಕತ್ವ ನೀಡಿದೆ. ಉದಾಹರಣೆಗೆ ಪ್ರೊ ಕಬಡ್ಡಿ ಲೀಗ್ನಲ್ಲಿ ಬೆಂಗಳೂರು ಬುಲ್ಸ್ನ ಸಹಾಯಕ ಪ್ರಾಯೋಜಕರಾಗಿದ್ದಾರೆ. ಆದರೆ ಕ್ರಿಕೆಟ್ ಆಟದೊಂದಿಗೆ ಇದೆ ಮೊದಲ ಬಾರಿಗೆ ಪ್ರಾಯೋಜಕತ್ವ ಪಡೆಯಲಿದೆ. ಕ್ರಿಕೆಟ್ ಪಿಚ್ನಲ್ಲಿ ‘ನಂದಿನಿ’ ಪಾದಾರ್ಪಣೆ ಮಾಡುವುದರೊಂದಿಗೆ ‘ನಂದಿನಿ-ಅಮುಲ್’ ವಿವಾದಕ್ಕೆ ಹೊಸ ತಿರುವು ಬರುವಂತೆ ತೋರುತ್ತಿದೆ.
ಅಮುಲ್ ಬ್ರಾಂಡ್ ಡೈರಿ ಉತ್ಪನ್ನಗಳಿಗೆ ಹೆಸರುವಾಸಿಯಾದ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟವು ಕ್ರಿಕೆಟ್ ಆಟದಲ್ಲಿ ಬಹಳ ಹಿಂದಿನಿಂದಲೂ ಇದೆ. 2011 ರಲ್ಲಿ ಆ ವರ್ಷದ ವಿಶ್ವಕಪ್ನಲ್ಲಿನೆದರ್ಲ್ಯಾಂಡ್ಸ್ ಕ್ರಿಕೆಟ್ ತಂಡವನ್ನು ಪ್ರಾಯೋಜಿಸಿದ್ದರು. ಅಂದಿನಿಂದ ಹಿಂತಿರುಗಿ ನೋಡಿಲ್ಲ. ಅಮುಲ್ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದಂತಹ ವಿವಿಧ ತಂಡಗಳೊಂದಿಗೆ ಪಾಲುದಾರಿಕೆ ಮತ್ತು ಸಹಯೋಗವನ್ನು ಹೊಂದಿದೆ.
2019 ರಲ್ಲಿ, ಅಮುಲ್ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಪ್ರಾಯೋಜಕರಾಗಿದ್ದರು. ಕ್ರಿಕೆಟ್ ಪ್ರಾಯೋಜಕತ್ವಕ್ಕೆ ಕಾಲಿರಿಸಿರುವ ನಂದಿನಿ, “ಭಾರತ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಶ್ರೀಲಂಕಾ, ನೇಪಾಳ, ಓಮನ್, ನೆದರ್ಲ್ಯಾಂಡ್ಸ್, ಉಗಾಂಡಾ ಮತ್ತು ನಮೀಬಿಯಾ ಸೇರಿದಂತೆ ಒಂದು ಅಥವಾ ಎರಡು ತಂಡಗಳನ್ನು ಹುಡುಕುತ್ತಿದೆ. ನಾವು ಟೆಂಡರ್ ಕರೆದಿದ್ದೇವೆ. ಅದು ಅಂತಿಮ ಹಂತದಲ್ಲಿದೆ. ಚುನಾವಣಾ ಆಯೋಗದಿಂದ ಅನುಮತಿ ಪಡೆದ ನಂತರ ನಾವು ಮುಂದುವರೆಯುತ್ತೇವೆ” ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಟಿ20 ವಿಶ್ವಕಪ್ 2024 ಈ ವರ್ಷದ ಜೂನ್ 1 ರಿಂದ ಜೂನ್ 29 ರ ನಡುವೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ದೇಶಗಳಲ್ಲಿ ನಡೆಯಲಿವೆ.