ಶಿವಮೊಗ್ಗ: ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ನಿ ಹಾಗೂ ಬೆಂಬಲಿಗರ ಸಮ್ಮುಖದಲ್ಲಿ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಕೆ.ಎಸ್. ಈಶ್ವರಪ್ಪ ನಾಮಪತ್ರ ಸಲ್ಲಿಸಿದರು.
ಒಂದೇ ದಿನ ಎರಡನೇ ಬಾರಿಗೆ ಈಶ್ವರಪ್ಪ ಅವರು ಉಮೇದುವಾರಿಕೆ ಸಲ್ಲಿಸಿದ್ದಾರೆ. ಬೆಳಗ್ಗೆ ಈಶ್ವರಪ್ಪ ಪರವಾಗಿ ಅವರ ಅತ್ಯಾಪ್ತ ಹಾಗೂ ಮಾಜಿ ಪಾಲಿಕೆ ಸದಸ್ಯ ವಿಶ್ವಾಸ್ ನಾಮಪತ್ರ ಸಲ್ಲಿಸಿದ್ದರು. ಈಶ್ವರಪ್ಪ ನಾಮಪತ್ರ ಸಲ್ಲಿಕೆ ವೇಳೆ ಪತ್ನಿ ಜಯಲಕ್ಷ್ಮಿ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಮಾಜಿ ಪಾಲಿಕೆ ಸದಸ್ಯ ವಿಶ್ವಾಸ್ ಉಪಸ್ಥಿತರಿದ್ದರು.
ಲೋಕಸಭಾ ಚುನಾವಣೆ ಎರಡನೇ ಹಂತದ ನಾಮಪತ್ರ ಸಲ್ಲಿಕೆ ಶುಕ್ರವಾರ ಆರಂಭವಾಗಿದ್ದು, ಮೊದಲನೇ ದಿನವೇ ನಾಲ್ವರು ಅಭ್ಯರ್ಥಿಗಳಿಂದ ಒಟ್ಟು 5 ನಾಮಪತ್ರ ಸಲ್ಲಿಕೆಯಾಗಿವೆ. ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಎರಡು ನಾಮಪತ್ರ ಸಲ್ಲಿಕೆ ಮಾಡಿದ್ದರೆ, ಎಎಪಿ ಪಕ್ಷದ ಅಭ್ಯರ್ಥಿಯಾಗಿ ಸುಭಾನ್ ಖಾನ್, ಕೆ.ಆರ್.ಎಸ್. ಪಕ್ಷದ ಅಭ್ಯರ್ಥಿಯಾಗಿ ಎಸ್.ಕೆ.ಪ್ರಭು, ಪ್ರಜಾಕೀಯ ಪಕ್ಷದಿಂದ ಅರುಣ್ ಕೆ.ಎ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಶಿವಮೊಗ್ಗ ಲೋಕಸಭಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ಸಲ್ಲಿಕೆ ಮುಂಚೆ 8 ಕ್ಷೇತ್ರದಿಂದ ಜನ ಬಂದಿದ್ದಾರೆ. ಮನೆ ಮನೆಗೆ ಕಾರ್ಯಕರ್ತರು ಹೋಗಿ ಹಿಂದುತ್ವಕ್ಕೆ ಅಗಿರುವ ಅನ್ಯಾಯದ ಬಗ್ಗೆ ಹೇಳುತ್ತಾರೆ. ಶಿವಮೊಗ್ಗದ ಜನ ನನಗೆ ಬೆಂಬಲ ಕೋಡುತ್ತಾರೆ. 25 ಸಾವಿರ ಜನ ಬಂದು ನನಗೆ ಬೆಂಬಲ ಸೂಚಿಸಿದ್ದಾರೆ. ನಾಮಪತ್ರ ಸಲ್ಲಿಸಲ್ಲ ಎಂದವರಿಗೆ ಮೆರವಣಿಗೆಯೇ ಉತ್ತರ ಎಂದು ಹೇಳಿದರು.