ರಾಜಕೀಯಸುದ್ದಿ

ದೆಹಲಿ ಹೈಕೋರ್ಟ್‌ನಿಂದ ಸಿಕ್ಕಿಲ್ಲ ರಿಲೀಫ್‌ ; ಸುಪ್ರೀಂ ಕೋರ್ಟ್‌ ಕದ ತಟ್ಟಿದ ಅರವಿಂದ್ ಕೇಜ್ರಿವಾಲ್

ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ತಮ್ಮ ಬಂಧನ ಮತ್ತು ಜಾರಿ ನಿರ್ದೇಶನಾಲಯದ ರಿಮ್ಯಾಂಡ್‌ ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​  ಇಂದು (ಏಪ್ರಿಲ್‌ 10) ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದಾರೆ.

ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿಯನ್ನು ನಿನ್ನೆ (ಏಪ್ರಿಲ್‌ 9) ವಿಚಾರಣೆ ನಡೆಸಿದ್ದ ಹೈಕೋರ್ಟ್‌ ವಜಾ ಮಾಡಿತ್ತು. ಒಂದು ರಾಜ್ಯದ ಮುಖ್ಯಮಂತ್ರಿ ಎನ್ನುವ ಕಾರಣಕ್ಕೆ ಸ್ಪೆಷಲ್‌ ಟ್ರೀಟ್‌ಮೆಂಟ್‌ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ”ಕೇಜ್ರಿವಾಲ್ ಅವರ ಬಂಧನ ಮತ್ತು ರಿಮ್ಯಾಂಡ್‌ ಅನ್ನು ಕಾನೂನುಬಾಹಿರ ಎಂದು ಕರೆಯಲಾಗುವುದಿಲ್ಲ” ಎಂದು ಹೈಕೋರ್ಟ್‌ನ ನ್ಯಾ. ಸ್ವರಾನಾ ಕಾಂತ ಶರ್ಮಾ ಅವರುಳ್ಳ ಪೀಠ ತೀರ್ಪು ನೀಡಿತ್ತು.

ಇ.ಡಿ ಸಂಗ್ರಹಿಸಿದ ಸಾಕ್ಷ್ಯಗಳು ಅರವಿಂದ್ ಕೇಜ್ರಿವಾಲ್ ಪಿತೂರಿ ಮತ್ತು ಅಪರಾಧದ ಆದಾಯದ ಬಳಕೆ ಮತ್ತು ಮರೆಮಾಚುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ಹೈಕೋರ್ಟ್‌ ಅಭಿಪ್ರಾಯ ಪಟ್ಟಿತ್ತು. ಆರೋಪಿಯನ್ನು ಬಂಧಿಸಿರುವುದು ಮತ್ತು ರಿಮ್ಯಾಂಡ್‌ ಅನ್ನು ಕಾನೂನಿನ ಪ್ರಕಾರ ಪರಿಶೀಲಿಸಬೇಕೇ ಹೊರತು ಚುನಾವಣಾ ಸಮಯದ ಪ್ರಕಾರ ಅಲ್ಲ ಎಂದೂ ನ್ಯಾಯಾಲಯ ತನ್ನ ತಿಳಿಸಿತ್ತು. ಇ.ಡಿ ಸಂಗ್ರಹಿಸಿದ ಸಾಕ್ಷ್ಯಾಧಾರಗಳು ಅರವಿಂದ್ ಕೇಜ್ರಿವಾಲ್ ಇತರರೊಂದಿಗೆ ಪಿತೂರಿ ನಡೆಸಿರುವುದನ್ನು ಬಹಿರಂಗಪಡಿಸುತ್ತದೆ.

ಗೋವಾ ಚುನಾವಣೆಯಲ್ಲಿ ಹವಾಲಾ ಹಣ ಬಳಕೆಯಾಗಿದೆ ಎಂಬುದಕ್ಕೂ ಇ.ಡಿ ಸಾಕ್ಷಿ ಒದಗಿಸಿದೆ. ಹೀಗಾಗಿ ಕೇಜ್ರಿವಾಲ್ ಬಂಧನ ಕಾನೂನಿಗೆ ವಿರುದ್ಧವಾಗಿಲ್ಲ, ರಿಮ್ಯಾಂಡ್‌ ಅನ್ನು ಅಕ್ರಮ ಎಂದು ಕರೆಯಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು. ಹೀಗಾಗಿ ಸದ್ಯ ತಿಹಾರ್‌ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದ್ದಾರೆ.

ದೆಹಲಿ ಹೈಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ಆದೇಶವನ್ನು ಸಮರ್ಥನೀಯವಲ್ಲ ಎಂದು ಹೇಳಿದ್ದ ಆಮ್ ಆದ್ಮಿ ಪಕ್ಷ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದು ತಿಳಿಸಿತ್ತು. ಅಲ್ಲದೆ ದೆಹಲಿ ಹೈಕೋರ್ಟ್ ತೀರ್ಪನ್ನು ಆಮ್ ಆದ್ಮಿ ಪಕ್ಷ ಒಪ್ಪುವುದಿಲ್ಲ. ಹೈಕೋರ್ಟ್ ತೀರ್ಪಿನ ವಿರುದ್ಧ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದಾರೆ ಎಂದು ಆಪ್‌ ಮುಖಂಡರು ನಿನ್ನೆಯೇ ತಿಳಿಸಿದ್ದರು.

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಕೆ. ಕವಿತಾ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button