ನಂಜನಗೂಡು(ಮೈಸೂರು ಜಿಲ್ಲೆ): ನಂಜನಗೂಡು ಗೌತಮ ಪಂಚ ರಥೋತ್ಸವ ಶುಕ್ರವಾರ ನೆರವೇರಿದ್ದು, ಈ ವೇಳೆ ಶ್ರೀಕಂಠಸ್ವಾಮಿಯ ದರ್ಶನ ಪಡೆಯಲು ಸಾವಿರಾರು ಮಂದಿ ಭಕ್ತರು ಸೇರಿದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿ ಮುಗಿಲು ಮುಟ್ಟಿದ ಜಯಘೋಷದೊಂದಿಗೆ ಶ್ರೀಕಂಠಸ್ವಾಮಿಯ ಗೌತಮ ಪಂಚ ಮಹಾರಥೋತ್ಸವ ಬೆಳಗ್ಗೆ 6.30ಕ್ಕೆ ನೆರವೇರಿತು.
ನಂಜುಂಡೇಶ್ವರ ದೇವಾಲಯದ ರಥ ಬೀದಿಯಲ್ಲಿ ಜಮಾಯಿಸಿದ್ದ ಸಾವಿರಾರು ಭಕ್ತರು ಹೆಬ್ಬಾವಿನ ಗಾತ್ರದ ರಥದ ಮಿಣಿಯನ್ನು ಎಳೆದು ಹರಕೆ ಸಲ್ಲಿಸಿದರು. ‘ಬಂದಾನಪ್ಪೋ ಬಂದಾನೋ… ನಂಜುಂಡಪ್ಪ ಬಂದಾನೋ… ಎಂದು ದೊಡ್ಡರಥವನ್ನು ಎಳೆಯುತ್ತಿದ್ದರೆ ನೆರೆದ ಭಕ್ತಾದಿಗಳು ಹಣ್ಣು ಮತ್ತು ತಮ್ಮ ಇಚ್ಛಾನುಸಾರ ದೇವರಿಗೆ ಎಸೆದು ನಮಿಸಿದರು.
ಶ್ರೀಕಂಠಸ್ವಾಮಿಯ 110 ಟನ್ ತೂಕ ಹಾಗೂ 90 ಅಡಿ ಎತ್ತರದ ಗೌತಮ ರಥ, ಪಾರ್ವತಿ ಅಮ್ಮನವರು, ಗಣೇಶ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿ ಸೇರಿದಂತೆ 5 ರಥಗಳು ಒಂದೂವರೆ ಕಿಲೋ ಮೀಟರ್ ಉದ್ದದ ರಥಬೀದಿಯಲ್ಲಿ ಸಾಗಿದವು.