ಲಿಂಕನ್‌ಶೈರ್: ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿ ಆಕೆಯ ದೇಹವನ್ನು 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಸುಮಾರು ಒಂದು ವಾರ ಕಾಲ ಅಡುಗೆ ಮನೆಯಲ್ಲಿ ಇಟ್ಟು ನದಿಗೆ ಎಸೆದಿರುವ ಭೀಕರ ಘಟನೆ ಇಂಗ್ಲೆಂಡ್ನ ಲಿಂಕನ್‌ಶೈರ್ ನಲ್ಲಿ ನಡೆದಿದೆ.

ಪ್ರಾರಂಭದಲ್ಲಿ ಪತ್ನಿ ನನ್ನಿಂದ ಅವಿತುಕೊಂಡಿದ್ದಾಳೆ ಎಂದು ಪೊಲೀಸರ ಮುಂದೆ ತಮಾಷೆ ಮಾಡಿ ನಗುತ್ತಿದ್ದ ಆರೋಪಿ ಬಳಿಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನಿಕೋಲಸ್ ಮೆಟ್ಸನ್ (28) ತನ್ನ ಪತ್ನಿ ಹಾಲಿ ಬ್ರಾಮ್ಲಿ (26)ಯನ್ನು ಮಾರ್ಚ್‌ನಲ್ಲಿ ತನ್ನ ಪತ್ನಿಯನ್ನು ಕೊಂದಿರುವುದಾಗಿ ಹೇಳಿದ್ದಾನೆ. ಹಾಲಿ ಬ್ರಾಮ್ಲಿಯನ್ನು ಬೆಡ್ ರೂಮ್‌ನಲ್ಲೇ ಚಾಕುವಿನಿಂದ ಇರಿದು ಕೊಂದಿದ್ದ ನಿಕೋಲಸ್ ಮೆಟ್ಸನ್ ಬಳಿಕ ಆಕೆಯ ಶವವನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗಿ 200ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ದೇಹದ ಚೂರುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಟ್ಟಿದ್ದ. ಬಳಿಕ ಅದನ್ನು ಅಡುಗೆಮನೆಯ ಲ್ಯಾಡರ್ ನಲ್ಲಿ ಆಹಾರ ಸಂಗ್ರಹಣೆ ರೀತಿಯಂತೆ ತಂಪಾದ ಪ್ರದೇಶದಲ್ಲಿ ವಾರಗಳ ಕಾಲ ಇರಿಸಿದ್ದಾನೆ.
ಪತ್ನಿಯ ದೇಹದ ಭಾಗಗಳನ್ನು ವಿಲೇವಾರಿ ಮಾಡಲು ಸ್ನೇಹಿತನ ಸಹಾಯ ಕೇಳಿದ್ದ ನಿಕೋಲಸ್ ಮೆಟ್ಸನ್ ಅದಕ್ಕಾಗಿ ಆತನಿಗೆ 50 ಡಾಲರ್ ಹಣ ಪಾವತಿಸಿದನು. ವಿಥಮ್ ನದಿಯಲ್ಲಿ ಪ್ಲಾಸ್ಟಿಕ್ ಚೀಲಗಳು ತೇಲುತ್ತಿರುವುದು ಕಂಡು ಬಂದಿತ್ತು. ಒಂದು ಚೀಲದಲ್ಲಿ ಕೈ, ಇನ್ನೊಂದರಲ್ಲಿ ಬ್ರಾಮ್ಲಿ ತಲೆ ಹೀಗೆ 224 ದೇಹದ ಭಾಗಗಳು ಕಂಡು ಬಂದಿತ್ತು. ಸಾವಿಗೆ ಕಾರಣವನ್ನು ಕಂಡುಹಿಡಿಯುವುದು ಅಸಾಧ್ಯ ಎನ್ನುವ ರೀತಿಯಲ್ಲಿ ಆಕೆಯ ದೇಹವನ್ನು ಕತ್ತರಿಸಲಾಗಿತ್ತು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮಗಳು ಮದುವೆಯಾಗಿ ಕೇವಲ 16 ತಿಂಗಳಾಗಿದೆ. ಮದುವೆಯಾದ ಮೇಲೆ ಅವಳಿಗೆ ತನ್ನ ಕುಟುಂಬವನ್ನು ಭೇಟಿ ಮಾಡಲು ಆತ ಅವಕಾಶ ನೀಡಲಿಲ್ಲ ಎಂದು ಬ್ರಾಮ್ಲಿ ತಾಯಿ ನ್ಯಾಯಾಲಯಕ್ಕೆ ಹೇಳಿದ್ದಾರೆ. ಬ್ರಾಮ್ಲಿ ಒಮ್ಮೆ ತನ್ನ ಮುದ್ದಿನ ಮೊಲಗಳೊಂದಿಗೆ ಮನೆಯಿಂದ ಹೊರಗೆ ಹೋಗಿದ್ದಳು. ಇದರಿಂದ ಸಿಟ್ಟುಗೊಂಡಿದ್ದ ನಿಕೋಲಸ್ ಮೆಟ್ಸನ್ ಆಹಾರ ಬ್ಲೆಂಡರ್ ಮತ್ತು ಮೈಕ್ರೋವೇವ್ ಓವನ್‌ನಲ್ಲಿ ಅವುಗಳನ್ನು ಹಾಕಿ ಕೊಂದಿದ್ದ. ಆಗ ಬ್ರಾಮ್ಲಿ ಪೊಲೀಸರಿಗೆ ದೂರು ನೀಡಿದ್ದಳು. ಮತ್ತೊಂದು ಬಾರಿ ಆತ ಹೊಸ ನಾಯಿಮರಿಯನ್ನು ವಾಷಿಂಗ್ ಮೆಷಿನ್‌ನಲ್ಲಿ ಹಾಕಿದನು ಎಂದು ಬ್ರಾಮ್ಲಿ ದೂರು ನೀಡಿದ್ದಳು.
ಮಾರ್ಚ್ 24 ರಂದು ಲಿಂಕನ್‌ಶೈರ್ ಪೊಲೀಸರು ಬ್ರಾಮ್ಲಿಯನ್ನು ಹುಡುಕಿಕೊಂಡು ಮನೆಗೆ ಬಂದಾಗ ಮೆಟ್ಸನ್ ಬಾಗಿಲು ತೆರೆದು ಹೆಂಡತಿಯಿಂದ ತಾನು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಹೇಳಿದ್ದ. ಪೊಲೀಸರು ಮನೆಯ ಬಾತ್ ಟಬ್ ಮತ್ತು ನೆಲದ ಮೇಲೆ ಹಲವಾರು ಕಲೆಗಳನ್ನು ನೋಡಿದರು. ಅಮೋನಿಯಾ ಮತ್ತು ಬ್ಲೀಚ್‌ನ ತೀವ್ರ ವಾಸನೆ ಕಂಡು ಬಂದು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ನ್ಯಾಯಾಲಯವು ಸೋಮವಾರ ಈ ಕುರಿತು ಆರೋಪಿಗೆ ಶಿಕ್ಷೆ ಪ್ರಕಟಿಸಲಿದೆ. ಆದರೆ ಇದುವರೆಗೆ ಆತ ಪತ್ನಿಯನ್ನು ಯಾಕೆ ಕೊಂಡ ಎಂದು ಹೇಳಿಲ್ಲ. ಆದರೆ ವಿಚಾರಣೆ ವೇಳೆ ಆತ ಮಾನಸಿಕ ಅಸ್ವಸ್ವತೆ ಹೊಂದಿರುವುದಾಗಿ ವಕೀಲರು ತಿಳಿಸಿದ್ದಾರೆ.


