ಲಖನೌ: ಲೋಕಸಭೆ ಚುನಾವಣೆಯ ಮೊದಲ ಐದು ಹಂತದ ಮತದಾನದಲ್ಲಿ ಬಿಜೆಪಿಯು ಈಗಾಗಲೇ 310 ಸ್ಥಾನಗಳ ಗಡಿ ದಾಟಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ”ಕಾಂಗ್ರೆಸ್ ಈ ಬಾರಿ 40 ಸೀಟುಗಳನ್ನೂ ಪಡೆಯುವುದಿಲ್ಲ,” ಎಂದು ಕುಟುಕಿದರು.
”ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಮ್ಮ ಮತಬ್ಯಾಂಕ್ ಕಳೆದುಹೋಗಲಿದೆ ಎಂಬ ಭೀತಿಯಿಂದ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಕಾರ‍್ಯಕ್ರಮವನ್ನು ಬಹಿಷ್ಕರಿಸಿದರು. ನುಸುಳುಕೋರರೇ ಕಾಂಗ್ರೆಸ್, ಎಸ್‌ಪಿ ಪಕ್ಷಗಳ ಮತಬ್ಯಾಂಕ್ ಆಗಿದ್ದಾರೆ. ರಾಜಕೀಯ ಲಾಭಕ್ಕಾಗಿ ದೇಶದ ಭದ್ರತೆ ಜತೆ ರಾಜಿ ಮಾಡಿಕೊಳ್ಳುವ ಮನಸ್ಥಿತಿ ಈ ಪಕ್ಷಗಳದ್ದಾಗಿದೆ,” ಎಂದು ಟೀಕಿಸಿದರು.
”ಮೊದಲ ಐದು ಹಂತದ ಮತದಾನದಲ್ಲಿ ಐಎನ್‌ಡಿಐಎ ಮೈತ್ರಿಕೂಟ ಧೂಳೀಪಟವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 40 ಸೀಟುಗಳನ್ನೂ ಪಡೆಯುವುದಿಲ್ಲ, ಸಮಾಜವಾದಿ ಪಕ್ಷ 4 ಸೀಟುಗಳನ್ನು ಸಹ ಗೆಲ್ಲುವುದಿಲ್ಲ,” ಎಂದು ಅಮಿತ್ ಶಾ ಭವಿಷ್ಯ ನುಡಿದರು.
ಜೂನ್ 4ರ ಫಲಿತಾಂಶದ ಬಳಿಕ ರಾಹುಲ್ ಗಾಂಧಿ ಅವರು “ಕಾಂಗ್ರೆಸ್ ಹುಡುಕುವ ಯಾತ್ರೆ” ನಡೆಸಲಿದ್ದಾರೆ. ಕಾಂಗ್ರೆಸ್ ಅನ್ನು ಬೈನಾಕ್ಯುಲರ್ ಮೂಲಕ ಹುಡುಕಿದರೂ ಕಾಣಿಸುವುದಿಲ್ಲ ಎಂದು ವ್ಯಂಗ್ಯವಾಡಿದರು. “ನನ್ನ ಮಾತು ಬರೆದಿಟ್ಟುಕೊಳ್ಳಿ, ಜೂನ್ 4ರಂದು ಫಲಿತಾಂಶ ಪ್ರಕಟವಾದ ಬಳಿಕ, ಜೂನ್ 6ರಂದು ರಾಹುಲ್ ಬಾಬಾ ರಜೆ ಕಳೆಯಲು ಹೋಗುತ್ತಾರೆ” ಎಂದು ಟೀಕಿಸಿದರು.