ತಮಿಳುನಾಡಿನ ತಿರುಚ್ಚಿಯಲ್ಲಿ ಕಿರಿದಾದ ರಸ್ತೆ ಡಿವೈಡರ್ ಮೇಲೆ ಯುವಕನೊಬ್ಬ ಬೈಕ್ ಸವಾರಿ ಮಾಡುತ್ತಿದ್ದು, ಈ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿದೆ. ರಸ್ತೆ ಸುರಕ್ಷತೆ ಮತ್ತು ಸ್ಟಂಟ್ ಡ್ರೈವಿಂಗ್ ಕುರಿತು ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನು ತಿರುಚ್ಚಿಯ ಕೊಲ್ಲಿಡಂ ನದಿ ಸೇತುವೆಯ ಮೇಲೆ ರಸ್ತೆಯ ಎರಡೂ ಬದಿಗಳಲ್ಲಿ ಭಾರೀ ಟ್ರಾಫಿಕ್ ನಡುವೆ ಕಿರಿದಾದ ರಸ್ತೆ ಡಿವೈಡರ್ ಮೇಲೆ ತನ್ನ ಬೈಕ್ ಅನ್ನು ಓಡಿಸುತ್ತಿರುವುದನ್ನು ಕಾಣಬಹುದು. ಯುವಕ ಹೆಲ್ಮೆಟ್ ಕೂಡ ಧರಿಸದೆ ಈ ಅಪಾಯಕಾರಿ ಸಾಹಸವನ್ನು ಪ್ರದರ್ಶಿಸಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ.
ಮೇ 23ರಂದು ಪೆರುಂಬಿಡುಗು ಮುತ್ತುರಾಯರ್ ಅವರ ಜನ್ಮದಿನವಾದ ‘ಮುತ್ತರಾಯರ್ ಸತ್ಯ ವಿಜಾ’ ಸಂದರ್ಭದಲ್ಲಿ ಯುವಕರ ಗುಂಪೊಂದು ಬೈಕ್ ಮೆರವಣಿಗೆ ನಡೆಸಿದಾಗ ಯುವಕನೊಬ್ಬ ಡಿವೈಡರ್ ಮೇಲೆ ಬೈಕ್ ಓಡಿಸಿರುವ ಘಟನೆ ನಡೆದಿದೆ.
ಸ್ಥಳೀಯರ ಪ್ರಕಾರ, ಪೊಲೀಸರ ನಿರ್ಬಂಧಗಳ ಹೊರತಾಗಿಯೂ ಅನೇಕ ಯುವಕರು ಬೈಕ್ ಸ್ಟಂಟ್‌ಗಳನ್ನು ಪ್ರದರ್ಶಿಸಿದರು. ರಸ್ತೆಗಳಲ್ಲಿ ಅತಿ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದರು. ಈ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಅನೇಕ ಸ್ಥಳೀಯರು ಈ ವ್ಯಕ್ತಿಯ ಅಪಾಯಕಾರಿ ಬೈಕ್ ಸ್ಟಂಟ್‌ಗಾಗಿ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಫ್ಲೈಓವರ್ ಮೇಲೆ ವ್ಯಕ್ತಿಯೊಬ್ಬ ಮಹಿಳೆಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಅಪಾಯಕಾರಿಯಾಗಿ ಬೈಕ್ ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಒಂದು ವಾರದ ಬಳಿಕ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋ ಗಮನಿಸಿದ ಪೊಲೀಸರು ಇಬ್ಬರನ್ನೂ ಪತ್ತೆ ಹಚ್ಚಿದ್ದಾರೆ.