Thursday, November 20, 2025
19.5 C
Bengaluru
Google search engine
LIVE
ಮನೆ#Exclusive NewsTop Newsಟೆಲಿಗ್ರಾಂ ಚಾನಲ್ ಸಲಹೆ ಆಧರಿಸಿ ಷೇರು ಮಾರ್ಕೆಟ್‌ನಲ್ಲಿ ಹೂಡಿಕೆ: 200ಕ್ಕೂ ಅಧಿಕ ಜನರಿಗೆ ಚೊಂಬು!

ಟೆಲಿಗ್ರಾಂ ಚಾನಲ್ ಸಲಹೆ ಆಧರಿಸಿ ಷೇರು ಮಾರ್ಕೆಟ್‌ನಲ್ಲಿ ಹೂಡಿಕೆ: 200ಕ್ಕೂ ಅಧಿಕ ಜನರಿಗೆ ಚೊಂಬು!

ನವದೆಹಲಿ : ಸೋಷಿಯಲ್ ಮೀಡಿಯಾಗಳಲ್ಲಿ ನೀವು ಗಮನಿಸಿರಬಹುದು. ಷೇರು ಮಾರುಕಟ್ಟೆಯಲ್ಲಿ ಯಾವ ಷೇರಿನ ಮೇಲೆ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಅನ್ನೋ ಸಂದೇಶಗಳು ಬರುತ್ತಿರುತ್ತವೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಚಾನಲ್‌ಗಳಲ್ಲಿ ಷೇರು ಮಾರುಕಟ್ಟೆ ಹೂಡಿಕೆ ಕುರಿತಾಗಿ ಮಾಹಿತಿ ನೀಡುವ ಹಲವು ಪೋಸ್ಟ್‌ಗಳು ದಿನ ನಿತ್ಯ ಕಂಡು ಬರುತ್ತವೆ. ಈ ಪೋಸ್ಟ್‌ಗಳ ಹಿಂದೆ ದೊಡ್ಡದೊಂದು ಷಡ್ಯಂತ್ಯವಿದೆ!

ಹೌದು.. ಸಾಮಾನ್ಯವಾಗಿ ಬ್ಯಾಂಕ್‌ಗಳಲ್ಲಿ ಹಣ ಹೂಡಿಕೆ ಮಾಡಿದರೆ, ಮ್ಯೂಚ್ಯುಯಲ್ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡಿದರೆ ವರ್ಷಕ್ಕೆ ಇಂತಿಷ್ಟು ಶೇಕಡಾವಾರು ಲಾಭ ಸಿಗುತ್ತದೆ. ಆದರೆ, ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಕೆಲವೇ ದಿನಕ್ಕೆ ದುಪ್ಪಟ್ಟು ಲಾಭ ಗಳಿಸಬಹುದು ಎಂದು ಜನರನ್ನು ನಂಬಿಸಿ ಅವರಿಂದ ಹೂಡಿಕೆ ಮಾಡಿಸುವ ದುರುಳರ ಸಂಖ್ಯೆ ಹೆಚ್ಚಾಗಿದೆ. ಅಸಲಿಗೆ ಈ ವಂಚಕರು ಜನರ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸೋದೇ ಇಲ್ಲ!

ಕಳೆದ ವಾರ ಈ ಕಂಪನಿಯ ಷೇರಿನ ಮೇಲೆ ಹಣ ಹೂಡಿಕೆ ಮಾಡುವಂತೆ ಹೇಳಿದ್ದೆವು. ನೀವು ಹೂಡಿಕೆ ಮಾಡಿದ್ರಾ? ಇವತ್ತು ನೋಡಿ, ಈ ಕಂಪನಿ ಷೇರು ಮೌಲ್ಯ ದುಪ್ಪಟ್ಟಾಗಿದೆ! ಇಂಥಾದ್ದೊಂದು ಮೆಸೇಜ್ ಸೋಷಿಯಲ್ ಮೀಡಿಯಾದಲ್ಲಿ ಕಂಡಿದ್ದೇ ತಡ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು ಎಂದು ಬಯಸಿದವರಿಗೆ ಕೈ ಕೈ ಹಿಸುಕಿಕೊಳ್ಳುವಂತೆ ಆಗುತ್ತೆ. ಇನ್ನು ಮುಂದಾದರೂ ‘ಗುರು’ಗಳ ಮಾತು ಕೇಳಬೇಕು ಅನ್ನೋ ‘ಜ್ಞಾನೋದಯ’ ಆಗುತ್ತೆ. ಇದು ಮೊದಲ ಹಂತ!

‘ಜ್ಞಾನೋದಯ’ವಾದ ಕೂಡಲೇ ಷೇರ್ ಗುರುಗಳ ಸೋಷಿಯಲ್ ಮೀಡಿಯಾ ಪೇಜ್‌ಗೆ ಹೂಡಿಕೆದಾರರು ಸೇರ್ಪಡೆ ಆಗ್ತಾರೆ. ಆಗ ಗುರುಗಳು ಮೊದಲಿಗೆ ಷೇರು ಮಾರುಕಟ್ಟೆ ಅಂದರೇನು? ಅದರಲ್ಲಿ ಹಣ ಹೂಡಿಕೆ ಹೇಗೆ? ಲಾಭ ಗಳಿಸೋದು ಹೇಗೆ? ಎಂದು ಪ್ರವಚನ ನೀಡುತ್ತಾರೆ. ನಂತರ ನಿಮ್ಮನ್ನು ಸಿರಿವಂತರಾಗಿ ಮಾಡೋದೇ ನಮ್ಮ ಗುರಿ ಎನ್ನುತ್ತಾರೆ. ಲಾಭದ ಆಸೆಯಿಲ್ಲ ಎನ್ನುತ್ತಾರೆ. ನಾವು ಸಲಹೆ ನೀಡುವ ಕಂಪನಿಯ ಷೇರು ಖರೀದಿಸಿ, ನೀವೇ ನೋಡಿ ಎನ್ನುತ್ತಾರೆ!

ಹೌದು.. ವಂಚಕರು ತಮ್ಮದೇ ಆದ ನಕಲಿ ಷೇರು ಹೂಡಿಕೆ ಆಪ್ ಹಾಗೂ ವೆಬ್‌ಸೈಟ್ ಮಾಡಿಕೊಂಡಿರುತ್ತಾರೆ. ಅಸಲಿ ಷೇರು ಮಾರುಕಟ್ಟೆ, ಡಿಮ್ಯಾಟ್ ಅಕೌಂಟ್‌ಗಳಿಗೆ ಇದು ಸಂಬಂಧವೇ ಇರೋದಿಲ್ಲ. ಈ ಆಪ್‌ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಲು ಹೇಳುವ ವಂಚಕರು, ಇದರಲ್ಲಿ ಹಣ ಹೂಡಿಕೆ ಮಾಡುವಂತೆ ಹೇಳುತ್ತಾರೆ. ಆರಂಭದಲ್ಲಿ ಹೂಡಿಕೆ ಮಾಡಿದ ಹಣ ಕೆಲವೇ ದಿನಗಳಲ್ಲಿ ದುಪ್ಪಟ್ಟಾದ ರೀತಿ ಕಾಣುವಂತೆ ಮಾಡುತ್ತಾರೆ. ನಂತರ ಏಕಾಏಕಿ ‘ನೀವು ಹೂಡಿಕೆ ಮಾಡಿದ ಕಂಪನಿಯ ಷೇರು ಮೌಲ್ಯ ಕುಸಿಯಿತು’ ಎಂದು ಕಥೆ ಕಟ್ಟುತ್ತಾರೆ. ನಿಮ್ಮ ಹಣ ವಂಚಕರ ಪಾಲಾಗಿರುತ್ತೆ!

ತಮಗಾದ ವಂಚನೆಯನ್ನು ದಿಲ್ಲಿ ಮಹಿಳೆ ದಿಲ್ಲಿ ಪೊಲೀಸರ ಗಮನಕ್ಕೆ ತಂದರು. ಪೊಲೀಸರ ತನಿಖೆ ವೇಳೆ 200ಕ್ಕೂ ಹೆಚ್ಚು ಮಂದಿ ಈ ರೀತಿ ಮೋಸ ಹೋಗಿದ್ದಾರೆ ಎಂದು ತಿಳಿದು ಬಂತು. ಹಲವು ಪ್ರಕರಣಗಳಲ್ಲಿ ಪೊಲೀಸರು ವಂಚಕರನ್ನು ಸೆರೆ ಹಿಡಿದಿದ್ದಾರೆ. ಇಷ್ಟಾದರೂ ವಂಚಕರು ಹಲವು ಮಾರ್ಗಗಳ ಮೂಲಕ ಜನರನ್ನು ವಂಚಿಸುತ್ತಾರೆ. ಹೀಗಾಗಿ, ಜನತೆ ಹಣ ಹೂಡಿಕೆ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments