ಪ್ರಪಂಚದ ಅನೇಕ ವಿಷಯಗಳು ಇನ್ನೂ ನಿಗೂಢವಾಗಿಯೇ ಉಳಿದಿದೆ. ಅವುಗಳಲ್ಲಿ ಮತ್ಸ್ಯ ಕನ್ಯೆಯೂ ಒಂದು.  ಸಿನಿಮಾಗಳಲ್ಲಿ, ಹಲವಾರು ಕಥೆಗಳಲ್ಲಿ ಮತ್ಸ್ಯ ಕನ್ಯೆಯ ಅಸ್ತಿತ್ವದ ಬಗ್ಗೆ ಹೇಳಲಾಗುತ್ತದೆ. ಆದರೆ ನಿಜವಾಗಿಯೂ ಅದರ ಅಸ್ತಿತ್ವ ಇದೆಯೇ ಎಂಬುದು ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಚರ್ಚೆಗಳಾಗುತ್ತಿರುತ್ತವೆ. ಕೆಲವರು ಮತ್ಸ್ಯ ಕನ್ಯೆಯ ಅಸ್ತಿತ್ವವಿದೆಯೆಂದು ನಂಬಿದರೆ, ಇನ್ನೂ ಹಲವರು  ಇದೆಲ್ಲಾ ಕಾಲ್ಪನಿಕ ಕಥೆ ಎಂದು ಹೇಳುತ್ತಾರೆ.

ಅಂತಹದ್ದೇ ಗೊಂದಲ ಇದೀಗ ಮೂಡಿದೆ. ಇತ್ತೀಚಿಗೆ  ಪಪುವಾ ನ್ಯೂಗಿನಿಯಾ  ದ್ವೀಪದ ಕರಾವಳಿ ತೀರದಲ್ಲಿ ಮತ್ಸ್ಯ ಕನ್ಯೆಯಂತೆಯೇ  ಕಾಣುವ ವಿಚಿತ್ರ ಸಮುದ್ರ ಜೀವಿಯೊಂದು ಪತ್ತೆಯಾಗಿದೆ. ಇದನ್ನು ಕಂಡ ಸ್ಥಳಿಯರಲ್ಲಿ  ಇದು ನಿಜವಾಗಿಯೂ ಮತ್ಸ್ಯಕನ್ಯೆಯಾಗಿರಬಹುದೇ ಎಂಬ ಗೊಂದಲ ಉಂಟಾಗಿದೆ.

ಈ ನಿಗೂಢ ಸಮುದ್ರ ಜೀವಿಯ ಫೋಟೋಗಳನ್ನು ನ್ಯೂ ಐರ್ಲೆಂಡ್ ಓನ್ಲಿ ಎಂಬ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಕಂಡ ಅನೇಕರಿಗೆ ಇದು ಯಾವ ವಿಚಿತ್ರ ಜೀವಿ ಎಂಬ ಗೊಂದಲ ಉಂಟಾಗಿದೆ. ಹಲವರು ಇದು ನಿಜವಾದ ಮತ್ಸ್ಯ ಕನ್ಯೆ ಎಂದು ಹೇಳಿದ್ದಾರೆ. ಆದರೆ ಇದು ನಿಜವಾಗಿಯು ಮತ್ಸ್ಯಕನ್ಯೆಯೇ ಅಥವಾ ಬೇರೆ ಯಾವುದೋ ಜೀವಿಯೋ ಈ ಬಗ್ಗೆ ತಜ್ಞರು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ.

ವಿಜ್ಞಾನಿಗಳು ಹಾಗೂ ತಜ್ಞರು ಸಹ ಈ ವಿಚಿತ್ರ ಜೀವಿಯನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಕೆಲವು ತಜ್ಞರು ಇದು ಮತ್ಸ್ಯಕನ್ಯೆಯಲ್ಲ, ಯಾವುದೋ ಒಂದು ಸಮುದ್ರ ಜೀವಿಯಾಗಿರಬಹುದು ಎಂದು ಹೇಳಿದ್ದಾರೆ. ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾನಿಯದ ಸಮುದ್ರ ಸಸ್ತನಿ ತಜ್ಞ ಸಾಸ್ಚಾ ಹೂಕರ್ ಹೇಳುವಂತೆ, ಈ ವಿಚಿತ್ರ ಜೀವಿ  ಯಾವುದೇ ಮತ್ಸ್ಯಕನ್ಯೆಯಲ್ಲ.  ಇದು ಗ್ಲೋಬ್ಸ್ಟರ್ ಎಂದು ಹೇಳಿದ್ದಾರೆ.

ಗ್ಲೋಬ್ಸ್ಟರ್ ಎಂದರೆ ತಿಮಿಂಗಿಲ, ಶಾರ್ಕ್ ಇತ್ಯಾದಿ ದೈತ್ಯ ಸಮುದ್ರ ಜೀವಿಗಳ ಅವಶೇಷವಾಗಿದೆ. ಸಮುದ್ರದಲ್ಲಿ ಇಂತಹ  ಜೀವಿಗಳು ಸತ್ತ ನಂತರ ಅದರ ದೇಹದ ಭಾಗವು  ಕೊಳೆತು ಹೋಗಿ ಈ ರೀತಿಯ ವಿಲಕ್ಷಣ ಆಕಾರವನ್ನು ಪಡೆದುಕೊಳ್ಳುತ್ತದೆ ಎಂದು ಅವರು ವಿವರಿಸಿದ್ದಾರೆ.

By Veeresh

Leave a Reply

Your email address will not be published. Required fields are marked *

Verified by MonsterInsights
Did you find this content engaging?