ಚಾಮರಾಜನಗರ : ಯುವಕನೋರ್ವ ಯುವತಿಯ ನಗ್ನ ವಿಡಿಯೋವನ್ನು ಮನೆಯವರಿಗೆ ಕಳುಹಿಸಿ ಬೆದರಿಕೆ ಹಾಕಿದ್ದರಿಂದ ಮರ್ಯಾದೆಗೆ ಅಂಜಿದ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಹದೇಶ್ವರ ಬೆಟ್ಟ ಬಳಿಯ ತಾಳ ಬೆಟ್ಟದಲ್ಲಿ ನಡೆದಿದೆ. ಈ ಪೈಕಿ ಒಬ್ಬರು ಸಾವನ್ನಪ್ಪಿದ್ದು, ಮೂವರು ಸ್ಥಿತಿ ಗಂಭೀರವಾಗಿದೆ.
ವಿಷ ಸೇವನೆ ಮಾಡಿದವರನ್ನು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೋಕಿನ ಚಂದಗಾಲು ಗ್ರಾಮದ ಕುಟುಂಬದ ಸದಸ್ಯರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಹದೇವ ನಾಯಕ (65) ಎಂಬವರು ಮೃತಪಟ್ಟಿದ್ದು, ಉಳಿದವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಕುರಿತಂತೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಯುವಕ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಚೀರನಹಳ್ಳಿಯವನು ಎನ್ನಲಾಗಿದೆ. ಈತ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬದ ಯುವತಿಯನ್ನು ಪ್ರೀತಿ ಮಾಡುತ್ತಿದ್ದ, ಇಬ್ಬರೂ ಸಲುಗೆಯಿಂದ ಇದ್ದಾಗ ಯುವತಿಯ ನಗ್ನ ವಿಡಿಯೋ ಹಾಗೂ ಫೋಟೋ ತೆಗೆದುಕೊಂಡಿದ್ದಾನೆ. ನಂತರ ಅದನ್ನು ಆಕೆಯ ಕುಟುಂಬ ಸದಸ್ಯರಿಗೆ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಈ ಬಗ್ಗೆ ಬೇಸತ್ತ ಕುಟುಂಬ ಸದಸ್ಯರು ಸ್ಥಳೀಯ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೂ, ಪೊಲೀಸರಿಂದ ಯಾವುದೇ ನ್ಯಾಯ ಸಿಕ್ಕಿಲ್ಲ.
ಕೊನೆಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಡುವುದಾಗಿ ನಿರಂತರ ಬೆದರಿಕೆ ಹಾಕುತ್ತಿದ್ದರಿಂದ ಬೇಸತ್ತ ಕುಟುಂಬ ಮಹದೇಶ್ವರ ಬೆಟ್ಟಕ್ಕೆ ಹೋಗಿ ಅಲ್ಲಿ ದೇವರ ದರ್ಶನ ಪಡೆದು ನಂತರ ತಾಳ ಬೆಟ್ಟದಲ್ಲಿ ಕುಟುಂಬದ 4 ಜನರು ವಿಷ ಸೇವನೆ ಮಾಡಿದ್ದಾರೆ. ಮಹದೇವನಾಯಕ ಸಾವನ್ನಪ್ಪಿದ್ದು, ಉಳಿದ ಮೂವರು ವಿಷ ಸೇವಿಸಿ ಒದ್ದಾಡುತ್ತಿದ್ದುದನ್ನು ನೋಡಿದ ಸ್ಥಳೀಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಪೊಲೀಸರ ಸಹಾಯದೊಂದಿಗೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ವರದಿಯಾಗಿದೆ.