ಬೆಂಗಳೂರು : ‘ಮುಂಗಾರು ಮಳೆ’ ಖ್ಯಾತಿಯ ನಿರ್ಮಾಪಕ ಇ ಕೃಷ್ಣಪ್ಪ ಮತ್ತು ನಿರ್ದೇಶಕ ಯೋಗರಾಜ್ ಭಟ್ ಜೋಡಿ 16 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ. 16 ವರ್ಷಗಳ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಮುಂಗಾರುಮಳೆ ಚಿತ್ರ ನಟ ಗಣೇಶ್ ಗೆ ಗೋಲ್ಡನ್ ಸ್ಟಾರ್ ಪಟ್ಟ ನೀಡಿತ್ತು. ಈ ಚಿತ್ರದಲ್ಲಿ ನಟಿ ಪೂಜಾ ಗಾಂಧಿ ಪದಾರ್ಪಣೆ ಮಾಡಿದ್ದರೆ, ನಾಯಕಿಯ ತಂದೆಯ ಪಾತ್ರದಲ್ಲಿ ಅನಂತ್ ನಾಗ್ ನಟಿಸಿದ್ದರು. ಈ ಸೂಪರ್ ಹಿಟ್ ಚಿತ್ರದ ಹಿಂದಿನ ಸೂತ್ರದಾರರಾದ ನಿರ್ಮಾಪಕ ಇ ಕೃಷ್ಣಪ್ಪ ಮತ್ತು ನಿರ್ದೇಶಕ ಯೋಗರಾಜ್ ಭಟ್ ಮತ್ತೆ ಒಂದಾಗಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಈ ಹೊಸ ಚಿತ್ರದಲ್ಲಿ ಮತ್ತೆ ಹೊಸ ಮುಖಗಳ ಪರಿಚಯಕ್ಕೆ ಮುಂದಾಗಿದ್ದು, ಈಗಾಗಲೇ ಆಡಿಷನ್ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ಅಧಿಕೃತ ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಚಿತ್ರತಂಡ ಹೇಳಿದೆ. 16 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ”ಮುಂಗಾರು ಮಳೆ” ಕನ್ನಡ ಚಲನಚಿತ್ರೋದ್ಯಮದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಬಾಕ್ಸಾಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡಿದ್ದ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಒಂದು ಮಲ್ಟಿಪ್ಲೆಕ್ಸ್‌ನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ನಿರಂತರವಾಗಿ ಓಡಿದ ಭಾರತದ ಮೊದಲ ಚಿತ್ರ ಎಂಬ ದಾಖಲೆ ಕೂಡ ಮುಂಗಾರುಮಳೆ ಬತ್ತಳಿಕೆಯಲ್ಲಿದೆ.
ಈ ಚಿತ್ರ ದಕ್ಷಿಣ ಭಾರತದ ಚಿತ್ರರಂಗಕ್ಕೆ ಒಂದು ಮೈಲಿಗಲ್ಲು ಸ್ಥಾಪಿಸಿತ್ತು ಮತ್ತು ತೆಲುಗು, ತಮಿಳು, ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ರೀಮೇಕ್ ಆಗಿತ್ತು. ಅಂತೆಯೇ ನಟ ಗಣೇಶ್ ಅವರನ್ನು ‘ಗೋಲ್ಡನ್ ಸ್ಟಾರ್’ ಸ್ಥಾನಮಾನಕ್ಕೇರಿಸಿತ್ತು. ಇದೀಗ ಇದೇ ತಂಡ ಮತ್ತೆ ಇತಿಹಾಸ ಸೃಷ್ಟಿಗೆ ಮುಂದಾಗಿದ್ದು, ಪ್ರಸ್ತುತ ಈ ಬಹು ನಿರೀಕ್ಷಿತ ಚಿತ್ರ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ.