Wednesday, January 28, 2026
18.8 C
Bengaluru
Google search engine
LIVE
ಮನೆ#Exclusive NewsTop News‘ಕಂಗನಾಗೆ ಹೊಡೆದ ಮಹಿಳೆಗೆ ನಾನು ಕೆಲಸ ಕೊಡ್ತೀನಿ’: ಗಾಯಕ ವಿಶಾಲ್​ ದದ್ಲಾನಿ

‘ಕಂಗನಾಗೆ ಹೊಡೆದ ಮಹಿಳೆಗೆ ನಾನು ಕೆಲಸ ಕೊಡ್ತೀನಿ’: ಗಾಯಕ ವಿಶಾಲ್​ ದದ್ಲಾನಿ

ಬೆಂಗಳೂರು : ನಟಿ, ಸಂಸದೆ ಅವರಿಗೆ ಚಂಡಿಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಕಪಾಳಮೋಕ್ಷ ಮಾಡಿದ ಘಟನೆ ಬಗ್ಗೆ ದೇಶಾದ್ಯಂತ ಚರ್ಚೆ ಆಗುತ್ತಿದೆ. ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕಂಗನಾ ಅವರು ಬಾಲಿವುಡ್​ನಲ್ಲಿ ಅನೇಕರ ವಿರೋಧ ಕಟ್ಟಿಕೊಂಡಿರುವುದು ಗೊತ್ತೇ ಇದೆ. ಈಗ ಕಂಗನಾರ ಕೆನ್ನೆಗೆ ಬಾರಿಸಿದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿ ಕುಲ್ವಿಂದರ್​ ಕೌರ್​ ಅವರ ಪರವಾಗಿಯೂ ಕೆಲವರು ಮಾತನಾಡುತ್ತಿದ್ದಾರೆ. ಕುಲ್ವಿಂದರ್​ ಕೌರ್ಅವರಿಗೆ ಉದ್ಯೋಗ ನೀಡಲು ಜಯಪ್ರಿಯ ಗಾಯಕ ವಿಶಾಲ್​ ದದ್ಲಾನಿ  ಮುಂದೆ ಬಂದಿದ್ದಾರೆ.

ಗಾಯಕ ವಿಶಾಲ್​ ದದ್ಲಾನಿ ಅವರು ಇನ್​​ಸ್ಟಾಗ್ರಾಮ್​ ಸ್ಟೋರಿಯಲ್ಲಿ ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ನಾನು ಎಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ. ಆದರೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿಯ ಸಿಟ್ಟು ಏನು ಎಂಬುದು ನನಗೆ ಚೆನ್ನಾಗಿ ಅರ್ಥ ಆಗುತ್ತದೆ. ಕುಲ್ವಿಂದರ್​ ಕೌರ್​ ವಿರುದ್ಧ ಸಿಐಎಸ್​ಎಫ್​ನವರು ಏನಾದರೂ ಕ್ರಮ ಕೈಗೊಂಡರೆ, ಅವರಿಗಾಗಿ ನನ್ನಲ್ಲಿ ಉದ್ಯೋಗ ಕಾದಿರುತ್ತದೆ ಎಂಬುದನ್ನು ನಾನು ಖಚಿತಪಡಿಸುತ್ತೇನೆ. ಜೈ ಹಿಂದ್​, ಜೈ ಜವಾನ್​, ಕೈ ಕಿಸಾನ್​’ ಎಂದು ವಿಶಾಲ್​ ದದ್ಲಾನಿ ಬರೆದುಕೊಂಡಿದ್ದಾರೆ.

‘ಸ್ಕ್ಯಾನ್​ ಮಾಡಲು ಕಂಗನಾ ಅವರಿಗೆ ತಮ್ಮ ಫೋನ್​ ನೀಡಲು ಸೂಚಿಸಲಾಯಿತು. ಆದರೆ ಈಗ ತಾನು ಸಂಸದೆ ಎಂಬ ಕಾರಣಕ್ಕೆ ಅವರು ಫೋನ್​ ನೀಡಲು ನಿರಾಕರಿಸಿದರು. ಅಲ್ಲಿಂದ ವಾಗ್ವಾದ ಶುರುವಾಯಿತು. ಕುಲ್ವಿಂದರ್​ ಕೌರ್​ ಅವರನ್ನು ಕೆಲಸದಿಂದ ತೆಗೆದುಹಾಕಿದರೆ ಯಾರಾದರೂ ಅವರನ್ನು ನನ್ನ ಸಂಪರ್ಕಕ್ಕೆ ತನ್ನಿ. ಅವರಿಗೆ ಉತ್ತಮ ಉದ್ಯೋಗ ನೀಡುತ್ತೇನೆ’ ಎಂದು ವಿಶಾಲ್​ ದದ್ಲಾನಿ ಭರವಸೆ ನೀಡಿದ್ದಾರೆ.

ಗುರುವಾರ (ಜೂನ್​ 6) ಚಂಡಗಢ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಆದ ಬಳಿಕ ಕಂಗನಾ ರಣಾವತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದರು. ‘ನಮಸ್ಕಾರ ಸ್ನೇಹಿತರೇ. ಹಿತೈಷಿಗಳು ಹಾಗೂ ಮಾಧ್ಯಮದವರಿಂದ ನನಗೆ ಅನೇಕ ಕರೆಗಳು ಬರುತ್ತಿವೆ. ನಾನೀಗ ಸುರಕ್ಷಿತವಾಗಿದ್ದೇನೆ. ಚಂಡಿಗಢ ಏರ್​ಪೋರ್ಟ್​ನಲ್ಲಿ ಸೆಕ್ಯುರಿಟಿ ಚೆಕ್​ ಮಾಡುವಾಗ ಈ ಘಟನೆ ನಡೆಯಿತು. ಸೆಕ್ಯುರಿಟಿ ಚೆಕ್​ ಮುಗಿಸಿ ನಾನು ಮುಂದಕ್ಕೆ ಸಾಗುವಾಗ ಪಕ್ಕದ ಕ್ಯಾಬಿನ್​ನಲ್ಲಿ ಇದ್ದ ಸಿಐಎಸ್​ಎಫ್​ ಭದ್ರತಾ ಸಿಬ್ಬಂದಿ ಬಂದು ನನ್ನ ಮುಖಕ್ಕೆ ಹೊಡೆದರು ಹಾಗೂ ನನಗೆ ಬೈಯ್ಯಲು ಶುರುಮಾಡಿದರು.

ಯಾಕೆ ಹೀಗೆ ಮಾಡಿದ್ರಿ ಅಂತ ನಾನು ಅವರಿಗೆ ಕೇಳಿದೆ. ರೈತರ ಹೋರಾಟಕ್ಕೆ ತಾವು ಬೆಂಬಲ ನೀಡುವುದಾಗಿ ಅವರು ಹೇಳಿದರು. ನಾನು ಸುರಕ್ಷಿತವಾಗಿದ್ದೇನೆ. ಆದರೆ ಪಂಜಾಬ್​ನಲ್ಲಿ ಹೆಚ್ಚುತ್ತಿರುವ ಉಗ್ರವಾದ ಹಾಗೂ ಆತಂಕವಾದವನ್ನು ನಾವು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ನನ್ನ ಕಳಕಳಿ ಇರುವುದು. ಧನ್ಯವಾದ’ ಎಂದು ಕಂಗನಾ ವಿಡಿಯೋ ಮೂಲಕ ಹೇಳಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments