ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕೆಲ ತಿಂಗಳ ಹಿಂದೆ ಲೈಂಗಿಕ ಕಿರುಕುಳ ಆರೋಪದಡಿ ಪೋಕ್ಸೊ ಕೇಸ್ ದಾಖಲಿಸಿದ್ದ ಮಹಿಳೆ ಮೃತಪಟ್ಟಿದ್ದಾರೆ. ಉಸಿರಾಟದ ತೊಂದರೆಯಿಂದ ಹುಳಿಮಾವು ಬಳಿಯ ನ್ಯಾನೋ ಆಸ್ಪತ್ರೆಯಲ್ಲಿ ಮಮತಾ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ತಮ್ಮ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಹಲವರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ, ಈ ಸಂಬಂಧ ಎಸ್ ಐಟಿ ತನಿಖೆಗೆ ಸಹಕರಿಸಬೇಕೆಂದು ಮಾಜಿ ಸಿಎಂ ಯಡಿಯೂರಪ್ಪನವರ ಮನೆಗೆ ಹೋಗಿದ್ದಾಗ ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಆರೋಪಿಸಿದ್ದರು. ಈ ಸಂಬಂಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಾಲಕಿಗೆ ಮತ್ತು ಆಕೆಯ ತಾಯಿಗೆ ಸಹಾಯ ಮಾಡುವ ಬದಲು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಯಡಿಯೂರಪ್ಪ ವಿರುದ್ಧವೇ ಆರೋಪ ಮಾಡಿದ್ದರು. ಆದರೆ ಈ ಆರೋಪವನ್ನು ಯಡಿಯೂರಪ್ಪ ಅವರು ಸ್ಪಷ್ಟವಾಗಿ ನಿರಾಕರಿಸಿದ್ದರು. ಈ ಆರೋಪ ದುರುದ್ದೇಶಪೂರಿತ ಎಂದು ಹೇಳಿದ್ದರು. ನಂತರ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.
ದೂರುದಾರೆ ಮಹಿಳೆ ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ತೊಂದರೆ ಕಾಣುತ್ತಿದ್ದಂತೆ ಹುಳಿಮಾವು ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.