ಬೆಂಗಳೂರು: ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಮಾಜಿ ಶಾಸಕನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ.

ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದ ಬಳಸಿದ್ದರು. ‘ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಅತೀ ಹೆಚ್ಚು ಮಹಿಳೆಯರು ಸಮಾವೇಶದಲ್ಲಿ ಭಾಗಿಯಾಗಿದ್ದೀರಿ, ಇದರಿಂದ ಅವರಿಗೆ ಇಂದು ರಾತ್ರಿ ನಿದ್ದೆ ಬರುವುದಿಲ್ಲ. ಅದರಲ್ಲೂ ಇಂದು ರಮೇಶ್ ಜಾರಕಿಹೊಳಿ ಕೂಡ ಪ್ರಚಾರಕ್ಕೆ ಬಂದಿದ್ದರಿಂದ ಮಾತ್ರೆ ಜತೆಗೆ ಒಂದು ಪೆಗ್ ಎಕ್ಸ್ಟ್ರಾ ಹಾಕಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಮಾಜಿ ಶಾಸಕನ ವಿರುದ್ಧ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

ಸಂಜಯ್ ಪಾಟೀಲ್ ಎಕ್ಸ್‌ಟ್ರಾ ಪೆಗ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ನಾನು ರಾಜ್ಯದ ಮಹಿಳೆಯರನ್ನು ಪ್ರತಿನಿಧಿಸುತ್ತೇನೆ‌. ನಾಲಿಗೆ ಮೇಲೆ ಹಿಡಿತ ಇರಬೇಕು, ವೇದಿಕೆ ಮೇಲೆ ಇದ್ದವರು ಯಾಕೆ ತಡೆಯಲಿಲ್ಲ. ಸಂಜಯ್ ಪಾಟೀಲ್ ಮೂಲಕ ಮಾತನಾಡಿಸಿದ್ದಾರಾ? ಇದು ನನಗೆ ಮಾತ್ರವಲ್ಲ, ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ, ನಾನು ಲಿಂಗಾಯತ ಸಮಾಜದ ಹೆಣ್ಣು ಮಗಳು. ಇದು ಲಿಂಗಾಯತ ಸಮಾಜಕ್ಕೆ ಮಾಡಿದ ಅವಮಾನ. ಇಂತಹವರನ್ನು ಇಡೀ ರಾಜ್ಯದ ಮಹಿಳೆಯರು ಧಿಕ್ಕರಿಸಬೇಕು ಎಂದು ಕರೆ ಕೊಡುತ್ತೇನೆ ಎಂದರು.

ಮಹಿಳೆಯ ಆತ್ಮಗೌರವಕ್ಕೆ ಧಕ್ಕೆಯಾಗಿದೆ. ಬಿಜೆಪಿಯವರು ಮಹಿಳಾ ಸಬಲೀಕರಣ ವಿರೋಧಿಗಳು. ಗ್ಯಾರಂಟಿ ಯೋಜನೆಯ ಬಗ್ಗೆಯೂ ವಿರೋಧ ಮಾಡ್ತಾರೆ. ಬಿಜೆಪಿ ನಾಯಕರು ಹಳ್ಳಿಯ ಹೆಣ್ಣು ಮಗಳ ಬಗ್ಗೆ ಯಾಕೆ ಇಷ್ಟು ಹಗರುವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಯಾವುದೇ ಸ್ವಾರ್ಥಕ್ಕಾಗಿ ಯೋಜನೆ ಮಾಡಿಲ್ಲ. ಬಿಜೆಪಿಯ ಮನಸ್ಥಿತಿ ಬಗ್ಗೆ ಜನರಿಗೆ ಗೊತ್ತಾಗಿದೆ ಎಂದು ಕಿಡಿಕಾರಿದರು.

ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗೆ ಆಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಪೆಗ್‌ಗೆ ಹೊಸ ಭಾಷ್ಯ ಬರೆದಿದ್ದಾರೆ. ನಾನು ಮೊದಲು ಏನು ಮಾತನಾಡಿದ್ದೀನಿ ಎಂಬುವುದು ನನಗೆ ಗೊತ್ತಾಗುತ್ತಿಲ್ಲ. ನಾನು ಮಾತಾಡಿದ್ದರಲ್ಲಿ ಅವರ (ಹೆಬ್ಬಾಳ್ಕಕರ್) ಹೆಸರಿದ್ದರೆ ತೋರಿಸಿಕೊಡಿ. ಅಕ್ಕಾ ಬಾಯಿ ಅಂದ್ರೆ ಅವರೇ ಅಂತ ನೀವ್ಯಾಕೆ‌ ತಿಳಿದುಕೊಳ್ಳುತ್ತೀರಿ? ಎಕ್ಸ್‌ಟ್ರಾ ಪೆಗ್ ಅಂದ್ರೆ ಎನರ್ಜಿ ಡ್ರಿಂಕ್ ಎಂದು ಹೇಳಿದ್ದಾರೆ.

ಚುನಾವಣೆಯ ಸೋಲಿನ ಭಯದಿಂದ ಅವರಿಗೆ ಹೆದರಿಕೆ ಶುರುವಾಗಿದೆ. ನನ್ನ ತಾಯಿ ಮಹಿಳೆ, ನನ್ನ ಮಗಳು, ಹೆಂಡತಿಯೂ ಮಹಿಳೆಯೆಯೇ. ಭಾರತದ ಸಂಸ್ಕೃತಿ ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎನ್ನುವುದನ್ನು ಕಲಿಸಿದೆ, ನಾನು ತಪ್ಪು ಮಾಡಿದ್ರೆ ಚುನಾವಣೆ ಆಯೋಗ, ಪೊಲೀಸರಿದ್ದಾರೆ. ನಾನು ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ, ಯಾರದ್ದೋ ಮನೆಗೆ ಹೋಗಿ ರಾತ್ರಿ ಪ್ರತಿಭಟನೆ ‌ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ನಾನು ಹಾರ್ಟ್ ಪೇಷಂಟ್ ಇದ್ದೇನೆ, ಬೈ ಪಾಸ್ ಸರ್ಜರಿ ಸಹ ಆಗಿದೆ. ಹಾರ್ಟ್ ವೀಕ್ ಇದ್ದರೆ ಏನು ಗತಿ? ಅವರು ಹೀಗೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಪೃಥ್ವಿ ಸಿಂಗ್ ಮೇಲೆ ಹಲ್ಲೆ ಆಯ್ತು, ಅಂಗನವಾಡಿ ಟೀಚರ್ಸ್‌ ಮೇಲೆ ಹಲ್ಲೆ ನಡೆಯಿತು. ಸಚಿವೆ ತಮ್ಮ ಸ್ವಾರ್ಥಕ್ಕಾಗಿ ಇಲಾಖೆಯನ್ನು ದುರುಪಯೋಗ ಮಾಡ್ಕೊಳ್ತಿದ್ದಾರೆ. ಹೋರಾಟಕ್ಕೆ ಒಂದು ರೀತಿ ನೀತಿ ಇದೆ, ಅದನ್ನು ಬಿಟ್ಟು ಮನೆ‌ಬಾಗಿಲಿಗೆ ಬಂದು ಕೂರುವುದು ಎಷ್ಟು ಸರಿ? ನಾನು ಅವರ ಹೆಸರು ತೆಗೆದುಕೊಂಡಿದ್ದರೆ ಇಲ್ಲೇ ಶಿಕ್ಷೆ ಕೊಡಿ ಎಂದು ಹೇಳಿದ್ದಾರೆ.

By Veeresh

Leave a Reply

Your email address will not be published. Required fields are marked *

Verified by MonsterInsights