ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ, ನಟ, ಹಾಸ್ಯ ಕಲಾವಿದ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಛಾಪು ಮೂಡಿಸಿದ್ದ ದ್ವಾರಕೀಶ್(81) ಅವರು ಮಂಗಳವಾರ (ಏಪ್ರಿಲ್ 16) ನಿಧನರಾಗಿದ್ದಾರೆ. ಬಹುಮುಖ ಪ್ರತಿಭೆ, ಗಮನ ಸೆಳೆಯುವ ವ್ಯಕ್ತಿತ್ವ ಹೊಂದಿದ್ದ ದ್ವಾರಕೀಶ್ ಅವರು ಸ್ನೇಹಜೀವಿಯೂ ಆಗಿದ್ದರು. ಹಾಸ್ಯ ನಟನ ಸಾವಿನಿಂದ ನಿವಾಸದಲ್ಲಿ ನೀರವ ಮೌನ ಅವರಿಸಿದೆ. ದ್ವಾರಕೀಶ್ ಸಾಕು ನಾಯಿ ತನ್ನ ಮಾಲೀಕನ ನಿಧನ ಕಂಡು ಮೂಕ ವೇದನೆ ಅನುಭವಿಸುತ್ತಿದ್ದ ದೃಶ್ಯ ನಿವಾಸದ ಬಳಿ ಕಂಡು ಬಂದಿದೆ. ಈ ವಿಡಿಯೊ ವೈರಲ್ ಆಗುತ್ತಿದೆ.
ನಾಯಿಯ ಮೂಕ ವೇದನೆಯನ್ನು ಕಂಡ ಯೋಗಿ ದ್ವಾರಕೀಶ್ ಅವರು, ಮುದ್ದಿನ ನಾಯಿಯನ್ನು ಸಂತೈಸುವ ಕೆಲಸ ಮಾಡಿದ್ದಾರೆ. ದ್ವಾರಕೀಶ್ ಅಂತಿಮ ದರ್ಶನಕ್ಕೆ ಇಂದು ಮಧ್ಯಾಹ್ನ 11.30ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಲವು ಗಣ್ಯರು ನಟ ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ.
ದ್ವಾರಕೀಶ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ನೇತ್ರದಾನ ಮಾಡಿದ್ದರು. ಈಗ ದ್ವಾರಕೀಶ್ ಕೂಡ ತಮ್ಮ ಸಾವಿನ ನಂತರ ಇತರರ ಬಾಳಿಗೆ ಬೆಳಕಾಗಿದ್ದಾರೆ. ದ್ವಾರಕೀಶ್ ಕಣ್ಣನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಕುಟುಂಬದ ಸಮ್ಮತಿಯ ಮೇರೆಗೆ ಡಾ.ಶೈಲಜಾ ನೇತೃತ್ವದಲ್ಲಿ ನೇತ್ರ ಕಸಿ ಕಾರ್ಯ ನಡೆದಿದೆ.
ದ್ವಾರಕೀಶ್ ಅವರ ಮರಣದ ನಂತರ ಕುಟುಂಬಸ್ಥರಿಗೆ ಕರೆ ಮಾಡಿದಾಗ 10 ನಿಮಿಷದಲ್ಲಿ ನೇತ್ರದಾನ ಮಾಡಲು ಅನುಮತಿ ನೀಡಿದ್ದಾರೆ. ಮೃತಪಟ್ಟ 14 ಘಂಟೆಯೊಳಗೆ ಕಣ್ಣು ದಾನ ಮಾಡಬಹುದು. ಸಂಪೂರ್ಣ ಕಣ್ಣುನ್ನು ಈಗಾಗಲೇ ತೆಗೆದುಕೊಂಡಿದ್ದೇವೆ ಎಂದು ವೈದ್ಯೆ ಶೈಲಜಾ ಮಾತನಾಡಿದ್ದಾರೆ. ಇದರಿಂದ 10 ಜನಕ್ಕೆ ಈ ಕಣ್ಣುಗಳಿಂದ ಅನುಕೂಲವಾಗಲಿದೆ. ಪಟಾಕಿಯಲ್ಲಿ ಕಣ್ಣಿಗೆ ಹಾನಿಯಾದವರಿಗೆ ಹಾಗೂ ಪೂರ್ಣ ಅಂಧತ್ವ ಇರುವವರಿಗೆ ಅನುಕೂಲವಾಗುತ್ತದೆ ಎಂದು ಡಾ.ಶೈಲಜಾ ಮಾಹಿತಿ ನೀಡಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ 11:30ರವರೆಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದ್ವಾರಕೀಶ್ ದರ್ಶನದ ಬಳಿಕ ಬೆಂಗಳೂರಿನ ಚಾಮರಾಜನಗರ ಟಿಆರ್ ಮಿಲ್ ಪಕ್ಕದ ಸಾರ್ವಜನಿಕ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನ ನೆರವೇರಲಿದೆ. ದುಬೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಮಗ ಸಂತೋಷ್ ಚಿತೆಗೆ ಅಗ್ನಿಸ್ಪರ್ಶ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.