ಚಿಕ್ಕಮಗಳೂರು : ಭೀಕರ ಬರಕ್ಕೆ ತತ್ತರಿಸಿರೋ ಕಡೂರಿನಲ್ಲಿ ವಿಸ್ಮಯವೊಂದು ಕಂಡುಬಂದಿದೆ. ಭೂಮಂಡಲದ ವೈಚಿತ್ರ್ಯಕ್ಕೆ ಸಾಕ್ಷಿಯಾದ ಕಾಫಿನಾಡು ಚಿಕ್ಕಮಗಳೂರಿನ ಬರದ ತವರು ಕಡೂರಲ್ಲಿ ನಾಲ್ಕೇ ಅಡಿಗೆ ನೀರಿನ ಸೆಲೆ ಸೃಷ್ಟಿಯಾದ ಘಟನೆ ಬಿ. ಮಲ್ಲೆನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಖಾಲಿ ಗುಂಡಿಯೊಂದರಲ್ಲಿ ಕಡೂರು ತಾಲೂಕಿನ ಗ್ರಾಮದಲ್ಲಿ 8 ಅಡಿ ಅಗಲ, 4 ಅಡಿ ಆಳದ ಗುಂಡಿಯಲ್ಲಿ ನೀರು ಕಂಡುಬಂದಿದ್ದು ಬರದ ಸಂದರ್ಭದಲ್ಲೂ ನೀರು ಬತ್ತದೆ ಹಾಗೇ ಉಳಿದಿದೆ. ಯೋಗೀಶ್ ಎಂಬುವರ ತೋಟದ ಗುಂಡಿಯಲ್ಲಿ ನೀರು ಖಾಲಿಯೇ ಆಗುತ್ತಿಲ್ಲ.
ನೀರು ಖಾಲಿ ಮಾಡಿದಷ್ಟು ಗುಂಡಿಯಲ್ಲಿ ಮತ್ತೆ-ಮತ್ತೆ ನೀರು ತುಂಬಿಕೊಳ್ಳುತ್ತಿದೆ. ಯೋಗೀಶ್ ಕುಟುಂಬ ಕೊಡದಲ್ಲಿ ನೀರು ತುಂಬಿ ಗಿಡಕ್ಕೆ ಹಾಕುತ್ತಿದ್ದಾರೆ. ಖಾಲಿಯಾದಂತೆ ತುಂಬುತ್ತಿರುವಂತಹ ಗುಂಡಿಯ ನೀರಿನಿಂದ ರೈತ ಬೆಳೆಯನ್ನು ಉಳಿಸಿಕೊಂಡಿದ್ದಾನೆ.
ಕಡೂರು ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕಾಗಿದ್ದು, 1000 ಅಡಿ ಕೊರೆದರೂ ಕಡೂರಲ್ಲಿ ನೀರು ಸಿಗದೆ ಜನರು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮೂರು ಅಡಿ ಗುಂಡಿಯಲ್ಲಿ ನೀರು ಬಂದು ಪವಾಡ ಸೃಷ್ಠಿಸಿದ್ದು ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ.