ಗ್ಯಾರಂಟಿ ಯೋಜನೆಗಳ ನೆಪದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗದ ಜನರಿಗೆ ಮೀಸಲಿಟ್ಟ ಅನುದಾನವನ್ನು ಕಬಳಿಸುತ್ತಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಪ್ರಚಾರದ ವೇಳೆ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಜನರ ಗಮನ ಸೆಳೆದಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಕ್ಷೇತ್ರದಾದ್ಯಂತ ಓಡಾಡುತ್ತಿದ್ದು, ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಹುರುಪಿನಿಂದ ಕೆಲಸ ಮಾಡುವಂತೆ ಹುರಿದುಂಬಿಸುತ್ತಿದ್ದಾರೆ.

ಮಂಗಳವಾರ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಅವರು ಬೆಂಗಳೂರಿಗೆ ಭೇಟಿ ನೀಡಿದ್ದು, ಇದರಿಂದ ಕಾರ್ಯಕರ್ತರ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ. ಕೇಂದ್ರ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಿದ ವಿಜಯ ಸಂಕಲ್ಪ ಸಮಾವೇಶ ಹಾಗೂ ಶಕ್ತಿ ಕೇಂದ್ರ ಪ್ರಮುಖರ ಸಮ್ಮೇಳನದಲ್ಲಿ ಪಾಲ್ಗೊಂಡ ಅಭ್ಯರ್ಥಿ ಡಾ.ಕೆ.ಸುಧಾಕರ್‌, ದಲಿತರು ಹಾಗೂ ಹಿಂದುಳಿದವರಿಗೆ ಕಾಂಗ್ರೆಸ್‌ ಮಾಡುತ್ತಿರುವ ಅನ್ಯಾಯವನ್ನು ವಿವರಿಸಿದರು.

ಕಾಂಗ್ರೆಸ್‌ ಸರ್ಕಾರಕ್ಕೆ ಈ ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳೇ ಆಧಾರ. ಆದರೆ ಈ ತಾತ್ಕಾಲಿಕ ಗ್ಯಾರಂಟಿಗಳು ಜನರ ಭವಿಷ್ಯ ಮತ್ತು ಬದುಕನ್ನು ಕಟ್ಟಿಕೊಡುವ ಕೆಲಸ ಮಾಡುವುದಿಲ್ಲ. ಮೋದಿ ಸರ್ಕಾರ ಕೊಡುವ ಸರ್ಕಾರವಾಗಿದ್ದರೆ, ಕಾಂಗ್ರೆಸ್‌ ಸರ್ಕಾರ ಕಿತ್ತುಕೊಳ್ಳುವ ಸರ್ಕಾರವಾಗಿದೆ. ಈ ಹಿಂದೆ ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕಿಸಾನ್‌ ಸಮ್ಮಾನ್‌ ನೀಡಿದ್ದು, ಅದನ್ನು ಕಾಂಗ್ರೆಸ್‌ ಸರ್ಕಾರ ಕಿತ್ತುಕೊಂಡಿದೆ.

ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ರೈತ ವಿದ್ಯಾನಿಧಿ ನೀಡಿದ್ದು, ಅದನ್ನು ಕಾಂಗ್ರೆಸ್‌ ಕಿತ್ತುಕೊಂಡಿದೆ. ದೀನ ದಲಿತರ ಉದ್ಧಾರದ ಮಾತನಾಡುವ ಇದೇ ಕಾಂಗ್ರೆಸ್‌ ಸರ್ಕಾರ, ಅವರಿಗೆ ಮೀಸಲಿಟ್ಟ ಹಣದಲ್ಲಿ 11 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗೆ ಬಳಸಿದೆ. ಈ ಸತ್ಯವನ್ನು ಜನರಿಗೆ ಬಿಜೆಪಿ ಕಾರ್ಯಕರ್ತರು ತಿಳಿಸಬೇಕು ಎಂದು ಕಿವಿಮಾತು ಹೇಳಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ಗೆ ಸಂಬಂಧಿಸಿದ ಸ್ಥಳಗಳನ್ನು ಪಂಚತೀರ್ಥವಾಗಿ ಪ್ರಧಾನಿ ಮೋದಿ ಅಭಿವೃದ್ಧಿಪಡಿಸಿದ್ದಾರೆ.

ಆದರೆ ಕಾಂಗ್ರೆಸ್‌ ಅವರನ್ನು ಜೀವನದುದ್ದಕ್ಕೂ ಅಪಮಾನ ಮಾಡಿತ್ತು. ಈ ಇತಿಹಾಸವನ್ನು ನಾವು ಜನರಿಗೆ ತಿಳಿಸಬೇಕಿದೆ. ಈ ದೇಶದ ಹಿಂದುಳಿದ ನಾಯಕರು ನಾವೇ ಎಂದು ಹೇಳುವವರು ಯಾವುದೇ ಕೆಲಸ ಮಾಡಿಲ್ಲ. ದೇಶದ ಹಿಂದುಳಿದ ವರ್ಗದ ಅತಿ ದೊಡ್ಡ ನಾಯಕ ಎಂದರೆ ಅದು ನರೇಂದ್ರ ಮೋದಿ ಮಾತ್ರ ಎಂದರು. ಕೇಂದ್ರ ಸರ್ಕಾರ ಕೋವಿಡ್‌ನಿಂದ ಆರಂಭವಾಗಿ ಬಡಜನರಿಗೆ 5 ಕೆಜಿ ಅಕ್ಕಿಯನ್ನು ನೀಡುತ್ತಿದೆ. ಆದರೆ ಫಲಾನುಭವಿಗಳನ್ನು ಕೇಳಿದರೆ ಇದನ್ನು ಕಾಂಗ್ರೆಸ್‌ ನೀಡುತ್ತಿದೆ ಎನ್ನುತ್ತಾರೆ. ಈ ಸತ್ಯವನ್ನು ಬೂತ್‌ ಕಾರ್ಯಕರ್ತರು ಮನೆಮನೆಗೆ ತಲುಪಿಸಬೇಕು ಎಂದರು.

ಆಯುಷ್ಮಾನ್‌ ಭಾರತ್‌, ಉಜ್ವಲ ಸಿಲಿಂಡರ್‌ ಮೊದಲಾದ ಯೋಜನೆಗಳ ಬಗ್ಗೆ ತಿಳಿಸಬೇಕು. 500 ವರ್ಷಗಳ ಕನಸಾದ ರಾಮ ಮಂದಿರವನ್ನು ನಿರ್ಮಿಸಲು ನರೇಂದ್ರ ಮೋದಿ ಶ್ರಮಿಸಿದ್ದಾರೆ. ಈ ವಿಷಯವನ್ನು ಕೂಡ ಕಾರ್ಯಕರ್ತರು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ದೇಶದಲ್ಲಿ 400 ಕ್ಷೇತ್ರಗಳನ್ನು ಗೆಲ್ಲಲು ರಾಜ್ಯದಲ್ಲಿ 28 ಸ್ಥಾನ ಗೆಲ್ಲುವುದು ಅಗತ್ಯ. ಹತ್ತು ವರ್ಷದ ಆಡಳಿತದ ಬಳಿಕ ದೇಶದಲ್ಲಿ ಸಾಮಾನ್ಯವಾಗಿ ಆಡಳಿತ ವಿರೋಧಿ ಅಲೆ ಇರುತ್ತದೆ. ಆದರೆ ಇದಕ್ಕೆ ವಿರುದ್ಧವಾಗಿ ದೇಶದಲ್ಲಿ ಮೋದಿ ಪರವಾದ ಅಲೆ ಇದೆ. ಈ ಅಲೆಯನ್ನು ಮತವಾಗಿ ಪರಿವರ್ತಿಸಬೇಕು ಎಂದು ಕರೆ ನೀಡಿದರು.

ಗ್ಯಾರಂಟಿಗಳ ನೆಪದಲ್ಲಿ ನಾಡಿನ ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್‌ ಸರ್ಕಾರ ನಯವಂಚನೆ ಮಾಡುತ್ತಿದೆ. ದಲಿತರು, ಹಿಂದುಳಿದವರ ಅಭಿವೃದ್ಧಿಗೆ ಮೀಸಲಿರಬೇಕಾದ ಹಣವನ್ನ ಕಿತ್ತುಕೊಳ್ಳುವುದೇ ಕಾಂಗ್ರೆಸ್ ಗ್ಯಾರೆಂಟಿಗಳ ನೈಜ ಸ್ವರೂಪ ಎಂದು ಡಾ.ಕೆ.ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದರು. ದಲಿತರಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿದೆ. ದೇವರಾಜ ಅರಸು ನಿಗಮ, ವಿಶ್ವಕರ್ಮ ನಿಗಮ ಮೊದಲಾದ ನಿಗಮ, ಮಂಡಳಿಗೆ ಹೆಚ್ಚು ಅನುದಾನ ನೀಡಿಲ್ಲ. ಬಿಜೆಪಿ ಸರ್ಕಾರ ದೇವರಾಜ ಅರಸು ನಿಗಮಕ್ಕೆ 190 ಕೋಟಿ ರೂ. ನೀಡಿದರೆ ಸಿಎಂ ಸಿದ್ದರಾಮಯ್ಯ 100 ಕೋಟಿ ರೂ. ನೀಡಿದ್ದಾರೆ.

ಬಿಜೆಪಿ ಸರ್ಕಾರ ವಿಶ್ವಕರ್ಮ ನಿಗಮಕ್ಕೆ 25 ಕೋಟಿ ರೂ. ನೀಡಿದರೆ, ಸಿಎಂ ಸಿದ್ದರಾಮಯ್ಯ ಕೇವಲ 4 ಕೋಟಿ ರೂ. ನೀಡಿದ್ದಾರೆ. ಮಡಿವಾಳ ನಿಗಮಕ್ಕೆ ಬಿಜೆಪಿ ಸರ್ಕಾರ 25 ಕೋಟಿ ರೂ. ನೀಡಿದರೆ, ಸಿಎಂ ಸಿದ್ದರಾಮಯ್ಯ 3 ಕೋಟಿ ರೂ. ನೀಡಿದ್ದಾರೆ. ಇದರ ವಿರುದ್ಧವೂ ಹೋರಾಟ ಮಾಡಲಾಗುವುದು ಎಂದರು.

By admin

Leave a Reply

Your email address will not be published. Required fields are marked *

Verified by MonsterInsights