ಬೆಂಗಳೂರು : ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಆರನೇ ಚಿತ್ರಕ್ಕೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗುತ್ತಾರೆ ಎಂದು ತಿಳಿದು ಬಂದಿದೆ.
ಕನ್ನಡದಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ ನಿರ್ಮಿಸಿರುವ ಆರ್ ಚಂದ್ರು, ಇತ್ತೀಚಿಗೆ ಆರ್ ಸಿ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿ, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಏಕಕಾಲಕ್ಕೆ ಐದು ಚಿತ್ರಗಳಿಗೆ ಚಾಲನೆ ನೀಡಿದ್ದರು. ಈಗ ಆರ್ ಸಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಆರನೇ ಚಿತ್ರದ ಘೋಷಣೆಯಾಗಿದೆ.
ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ 6ನೇ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಆರ್ ಚಂದ್ರು ಅವರು ಟ್ವಿಟ್ ಮಾಡುವ ಮೂಲಕ ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ.