ಬೆಂಗಳೂರು: ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಆಗಿದೆ. ಗುರುವಾರ ಎಐಸಿಸಿ ಕರ್ನಾಟಕದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದೆ.
ಇದರೊಂದಿಗೆ ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಇನ್ನೂ ನಾಲ್ಕು ಕ್ಷೇತ್ರಗಳು ಬಾಕಿ ಉಳಿದುಕೊಂಡಿವೆ. ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಕುಟುಂಬದ ಬಲೆಯೊಳಗೆ ಸಿಲುಕಿದ್ದು, ಸಚಿವರ ಮಕ್ಕಳು, ಶಾಸಕರ ಸಹೋದರ ಸಂಬಂಧಿಗಳಿಗೆ ಮಣೆ ಹಾಕಿದೆ. ಲೋಕಸಭೆ ಚುನಾವಣೆಗೆ ಕರ್ನಾಟಕದ ಐವರು ಸಚಿವರ ಮಕ್ಕಳಿಗೆ ಟಿಕೆಟ್ ನೀಡಲಾಗಿದೆ.
ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆಗೆ ಬೀದರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಮಗ ಮೃಣಾಲ್ ಹೆಬ್ಬಾಳ್ಳರ್, ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಗೆ ಚಿಕ್ಕೋಡಿ, ಸಚಿವ ರಾಮಲಿಂಗರೆಡ್ಡಿ ಪುತ್ರಿ ಸೌಮ್ಯಾರೆಡ್ಡಿಗೆ ಬೆಂಗಳೂರು ದಕ್ಷಿಣ ಟಿಕೆಟ್, ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಅವರಿಗೆ ಬಾಗಲಕೋಟೆ ಲೋಕಸಭಾ ಟಿಕೆಟ್ ನೀಡಲಾಗಿದೆ.