ಬೆಂಗಳೂರು : ನಗರದ ಜಾಲಹಳ್ಳಿಯ ಪ್ರತಿಷ್ಟಿತ ಬಿ ಇ ಎಲ್ ನ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ರಾಷ್ಟ್ರಕವಿ ಕುವೆಂಪು ಕಾಲಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು. 2023-24 ನೇ ಸಾಲಿನ ಎಸ್ಎಸ್ಎಲ್ಸಿ ಮಕ್ಕಳಿಗೆ ಪ್ರೀತಿಯಿಂದ ಬೀಳ್ಕೊಡಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮನೋಶಾಸ್ತ್ರಜ್ಞೆ ಡಾ|| ಆಶಾ ಸಿದ್ದ್ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಆಶಾ ಸಿದ್ದ್, ನಿಮ್ಮ ಭವಿಷ್ಯ ನಿರ್ಮಾಪಕರು ನೀವೇ ಪೋಷಕರು ಮತ್ತು ಶಿಕ್ಷಕರು ಸಹಾಯಕರೇ ಹೊರತು ನಿರ್ಮಾಪಕರಲ್ಲ ಎಂಬುದನ್ನು ಒಂದು ಸಣ್ಣ ಕತೆಯ ಮೂಲಕ ತಿಳಿಸಿದರು. ಜೊತೆಗೆ ವಿದ್ಯಾರ್ಥಿಗಳಿಗೆ ನಾಲ್ಕು ಮುಖ್ಯ ಮೌಲ್ಯಗಳಾದ ಸ್ವಯಂ ಶಿಸ್ತು, ಆತ್ಮ ಗೌರವ, ದಯೆ ಮತ್ತು ಸಹಾನುಭೂತಿ, ದೊಡ್ಡ ಕನಸುಗಳನ್ನು ಮಕ್ಕಳಿಗೆ ರೂಢಿಸಿಕೊಳ್ಳಲು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಇಇಐನ ಕಾರ್ಯದರ್ಶಿಗಳಾದ ಧೀರಜ್ ತಾಕರೆ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಸಲಹೆ ಸೂಚನೆಗಳನ್ನು ಅರ್ಥವಾಗುವಂತೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಇಎಲ್ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಶ್ರೀನಿವಾಸ್ ವಹಿಸಿದ್ದರು. ವಿದ್ಯಾರ್ಥಿಗಳ ಪರೀಕ್ಷೆಗೆ ಶುಭ ಹಾರೈಸಿದರು. ಬಿ ಇ ಇ ಐ ನ ಸದಸ್ಯರು ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಯವರು ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.