ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ, ನಟ, ಹಾಸ್ಯ ಕಲಾವಿದ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಛಾಪು ಮೂಡಿಸಿದ್ದ ದ್ವಾರಕೀಶ್ (81) ಬಾರದ ಲೋಕಕ್ಕೆ ಹೋಗಿದ್ದಾರೆ. ಅನೇಕ ಗಣ್ಯರು, ಸಿನಿ ಕಲಾವಿದರು ನಟನ ಅಂತಿಮ ದರ್ಶನ ಪಡೆದದ್ದೂ ಆಗಿದೆ. ಇದೀಗ ಪೊಲೀಸ್ ಗೌರವಗಳೊಂದಿಗೆ ದ್ವಾರಕೀಶ್ ಅವರ ಅಂತಿಮ ವಿಧಿ ವಿಧಾನ ನೆರವೇರಿದೆ. ಚಾಮರಾಜಪೇಟೆಯ ಟಿಆರ್ ಮಿಲ್‌ನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನ ಆಗಿದ್ದು, ದುಬೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಮಗ ಸಂತೋಷ್ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ.
ದ್ವಾರಕೀಶ್ ಅವರ ಹಿರಿಯ ಮಗ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ವೇಳೆ ಕುಟುಂಬದವರು ಹಾಗೂ ಆಪ್ತರು ಹಾಜರಿದ್ದರು. ಅಂತಿಮ ಸಂಸ್ಕಾರಕ್ಕೂ ಮೊದಲು ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವವಂದನೆ ನೀಡಲಾಗಿದೆ.
ದ್ವಾರಕೀಶ್ ಕಣ್ಣನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಕುಟುಂಬದ ಸಮ್ಮತಿಯ ಮೇರೆಗೆ ಡಾ.ಶೈಲಜಾ ನೇತೃತ್ವದಲ್ಲಿ ನೇತ್ರ ಕಸಿ ಕಾರ್ಯ ನಡೆದಿದೆ. ದ್ವಾರಕೀಶ್ ಅವರ ಮರಣದ ನಂತರ ಕುಟುಂಬಸ್ಥರಿಗೆ ಕರೆ ಮಾಡಿದಾಗ 10 ನಿಮಿಷದಲ್ಲಿ ನೇತ್ರದಾನ ಮಾಡಲು ಅನುಮತಿ ನೀಡಿದ್ದರು. ಮೃತಪಟ್ಟ 14 ಗಂಟೆಯೊಳಗೆ ಕಣ್ಣು ದಾನ ಮಾಡಬಹುದು. ಸಂಪೂರ್ಣ ಕಣ್ಣುನ್ನು ಈಗಾಗಲೇ ತೆಗೆದುಕೊಂಡಿದ್ದೇವೆ ಎಂದು ವೈದ್ಯೆ ಶೈಲಜಾ ಮಾತನಾಡಿದ್ದರು ಇದರಿಂದ 10 ಜನಕ್ಕೆ ಈ ಕಣ್ಣುಗಳಿಂದ ಅನುಕೂಲವಾಗಲಿದೆ. ಪಟಾಕಿಯಲ್ಲಿ ಕಣ್ಣಿಗೆ ಹಾನಿಯಾದವರಿಗೆ ಹಾಗೂ ಪೂರ್ಣ ಅಂಧತ್ವ ಇರುವವರಿಗೆ ಅನುಕೂಲವಾಗುತ್ತದೆ ಎಂದು ಡಾ.ಶೈಲಜಾ ಮಾಹಿತಿ ನೀಡಿದ್ದರು.
ನಟ ದ್ವಾರಕೀಶ್ ಅವರು ಬರೀ ನಟ, ನಿರ್ಮಾಪಕ ಅಷ್ಟೇ ಅಲ್ಲ, ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದರು. ಅಂಬರೀಶ್, ಅನಂತನಾಗ್ ಅವರ ರೀತಿಯಲ್ಲಿ ವಿಧಾನಸಭೆ ಪ್ರವೇಶ ಮಾಡುವ ಆಸೆ ಹೊಂದಿದ್ದ ಅವರು, 2004ರಲ್ಲಿ ಆಪ್ತಮಿತ್ರ ಸಿನಿಮಾ ಶೂಟಿಂಗ್ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ಹೀಗಾಗಿ ಆಪ್ತಮಿತ್ರ ಸಿನಿಮಾಕ್ಕೂ ರಾಜಕೀಯಕ್ಕೂ ನಂಟು ಇದೆ.
ʼಕನ್ನಡ ನಾಡುʼ ಪಕ್ಷದಲ್ಲಿ ಗುರುತಿಸಿಕೊಂಡು ಕೆಲಸ ಮಾಡಿದ ದ್ವಾರಕೀಶ್ ಅವರು, 2004ರಲ್ಲಿ ಆ ಪಕ್ಷದಿಂದ ಹುಣಸೂರಿನಿಂದ ಸ್ಪರ್ಧೆ ಮಾಡಿದ್ದರು. ಹುಣಸೂರು ತಮ್ಮ ಹುಟ್ಟೂರು ಆಗಿದ್ದರಿಂದ ಅಲ್ಲಿ ಜನರು ಕೈ ಹಿಡಿಯುತ್ತಾರೆ ಎಂದು ಚುನಾವಣಾ ಕಣಕ್ಕಿಳಿದಿದ್ದರು. ಕ್ಷೇತ್ರದಾದ್ಯಂತ ಪ್ರಚಾರಕ್ಕೆ ಹೋದಾಗ ಉತ್ತಮ ಬೆಂಬಲ ಸಿಕ್ಕಿತ್ತು. ಆದರೆ ಚುನಾವಣೆಯಲ್ಲಿ ಕೇವಲ 2300 ಮತಗಳನ್ನು ಪಡೆದು ಡೆಪಾಸಿಟ್ ಸಹ ಕಳೆದುಕೊಂಡರು.