ಬೆಂಗಳೂರು : ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ನಡುವೆ ಅಪಸ್ವರ ಎದ್ದಿದೆ ಎಂಬ ವರದಿಗಳ ಬೆನ್ನಲ್ಲೇ ಆ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಜೆಡಿಎಸ್ ಮುನಿಸು ಶಮನಗೊಳಿಸಲು ಬಿಜೆಪಿ ಹೈಕಮಾಂಡ್ ನಾಯಕರು ಹೆಚ್‌ಡಿ ಕುಮಾರಸ್ವಾಮಿ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತುಕತೆ ನಡೆಸಿ, ಮೈತ್ರಿ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಕುಮಾರಸ್ವಾಮಿಗೆ ತಿಳಿಸಿದ್ದಾರೆ. ನಿಮ್ಮ ಹೃದಯದ ಚಿಕಿತ್ಸೆ ಸುಸೂತ್ರವಾಗಿ ನೆರವೇರಲಿ. ನಿಮ್ಮ ಆರೋಗ್ಯ ಸುಧಾರಿಸಿದ ನಂತರ ಮಾತುಕತೆ ನಡೆಸೋಣ. ಸದ್ಯದ ಮಟ್ಟಿಗೆ ನಿಮ್ಮ ಆರೋಗ್ಯಕ್ಕೆ ಮೊದಲ ಆದ್ಯತೆ ಆಗಿರಲಿ. ನೀವು ಗುಣಮುಖರಾದ ಬಳಿಕ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಮತ್ತು ಪ್ರಧಾನಿ ಮೋದಿ ಅವರನ್ನು ಒಂದೇ ವೇದಿಕೆಯಲ್ಲಿ ಬರುವಂತೆ ಮಾಡಿ ಕಾರ್ಯಕ್ರಮ ಮಾಡೋಣ ಎಂದು ಬಿಜೆಪಿ ಹೈಕಮಾಂಡ್ ಕುಮಾರಸ್ವಾಮಿಗೆ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸುವೆ.
ಸೋಮವಾರ ಪಕ್ಷದ ಸಭೆ ನಡೆಸಿದ್ದ ಕುಮಾರಸ್ವಾಮಿ, ರಾಜ್ಯ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಬಿಜೆಪಿ ನಾಯಕರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕಲಬುರಗಿ ಹಾಗೂ ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ಅಭಿಯಾನ ನಡೆದರೂ ಆ ಜಿಲ್ಲೆಗಳ ಜೆಡಿಎಸ್ ನಾಯಕರ ಬಳಿ ಸೌಜನ್ಯಕ್ಕೂ ಮಾತುಕತೆ ನಡೆಸಿಲ್ಲ. ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೂ ಆಹ್ವಾನ ನೀಡಿಲ್ಲ. ಅಲ್ಲದೆ ಕೇವಲ ಎರಡು ಸೀಟಿಗಾಗಿ ಬಿಜೆಪಿ ಜೊತೆ ಇಷ್ಟೆಲ್ಲ ಹೊಂದಾಣಿಕೆ ಮಾಡುವ ಅಗತ್ಯವಿದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು.