ಬೆಂಗಳೂರು: ಲಗೇಜ್ ತಪಾಸಣೆ ವೇಳೆ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿ ಪ್ರಯಾಣಿಕನೊಬ್ಬ ಆತಂಕ ಸೃಷ್ಟಿಸಿದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 28 ರಂದು ಈ ಘಟನೆ ನಡೆದಿದೆ.
ಥಾಣೆಯ ಸೋನಿಪತ್ ಮೂಲದ ಪೈ (47) ಎಂಬ ವ್ಯಕ್ತಿ ವಿರುದ್ಧ ಸೆಕ್ಷನ್ 505 (1) (ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇಂಜಿನಿಯರ್ ಆಗಿರುವ ಪೈ ಮಾರ್ಚ್ 28 ರಂದು ಬೆಂಗಳೂರಿನಿಂದ ಪುಣೆಗೆ ಏರ್ ಇಂಡಿಯನ್ ಎಕ್ಸ್‌ಪ್ರೆಸ್ ವಿಮಾನವನ್ನು ಹತ್ತಬೇಕಿತ್ತು. ಇ-9 ಪೋಸ್ಟ್ 10 ರ ಚೆಕ್ಕೌಂಟರ್ ಬಳಿ ತೆರಳವ ಮೊದಲು ಬ್ಯಾಗೇಜ್ ಸ್ಕ್ಯಾನಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ತನ್ನ ಬ್ಯಾಗ್ ನಲ್ಲಿ ಬಾಂಬ್ ಇರುವುದಾಗಿ ಕಿರುಚಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಜನರು ಆತಂಕಕ್ಕೊಳಗಾಗಿದ್ದಾರೆ.
ಈ ವೇಳೆ ಕರ್ತವ್ಯದಲ್ಲಿದ್ದ ಸಮೃದ್ಧಿ ಎಂಬುವವರು ಕೂಡಲೇ ಭದ್ರತಾ ಪಡೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬದ ಅಧಿಕಾರಿಗಳು ಬ್ಯಾಗ್ ಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾವುದೇ ಬಾಂಬ್ ಇಲ್ಲ ಎಂಬುದು ತಿಳಿದುಬಂದಿದೆ. ಘಟನೆ ಬಳಿಕ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಘಟನೆ ಬಳಿಕ ವಿಮಾನ ನಿಲ್ದಾಣದ ಸಿಬ್ಬಂದು ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ದೇವನಹಳ್ಳಿಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ದೂರನ್ನು ಹಾಜರುಪಡಿಸಿ, ಎಫ್ಐಆರ್ ದಾಖಲಿಗೆ ಅನುಮತಿ ಪಡೆದುಕೊಂಡಿದ್ದಾರೆ. ಅಂತಿಮವಾಗಿ ಏಪ್ರಿಲ್ 5 ರಂದು ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣ ಸಂಬಧ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ಅಥವಾ ದಂಡ ಪಾವತಿ, ಜೈಲು ಮತ್ತು ದಂಡ ಎರಡೂ ಶಿಕ್ಷೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.