ಅತಿರಥ ಮಹಾರಥರ ಆಗಮನಕ್ಕೆ ಅಣಿಯಾಗಿರೋ ಕರುನಾಡಿಗೆ ಇಂದು ಬಿಜೆಪಿ ಚುನಾವಣಾ ಚಾಣಕ್ಯ ಎಂಟ್ರಿಯಾಗಲಿದ್ದಾರೆ. ಡಿಕೆ ಬ್ರದರ್ಸ್ ಅಖಾಡದ ಮೂಲಕವೇ ಕಾಂಗ್ರೆಸ್ಗೆ ಠಕ್ಕರ್ ನೀಡಲು ಕೇಸರಿ ಪಾಳಯ ಪ್ಲಾನ್ ಮಾಡಿದೆ. ನಾಳೆ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಲಿರುವ ಅಮಿತ್ ಶಾ ಮೈತ್ರಿ ನಾಯಕರಿಗೆ ಬೂಸ್ಟ್ ನೀಡಲಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಿಜೆಪಿ ಪಾಳಯ ರಣತಂತ್ರಗಳನ್ನ ಹೆಣೆಯಲು ಮುಂದಾಗಿದೆ. ಅಬ್ಬರದ ಪ್ರಚಾರ ನಡೆಸಿ ವಿಜಯಲಕ್ಷ್ಮಿ ಒಲಿಸಕೊಳ್ಳುವ ತವಕದಲ್ಲಿದೆ. ದೇಶ ವಿಭಜನೆಯ ಬಗ್ಗೆ ಮಾತನಾಡಿದ್ದ ಡಿ.ಕೆ ಸುರೇಶ್ ಕ್ಷೇತ್ರದಿಂದ ಚುನಾವಣಾ ಪ್ರಚಾರಕ್ಕೆ ಅಮಿತ್ ಶಾ ಕಹಳೆ ಮೊಳಗಿಸಲಿದ್ದಾರೆ. ಇಂದು ರಾತ್ರಿ 11 ಗಂಟೆಗೆ ರಾಜಧಾನಿ ಬೆಂಗಳೂರಿಗೆ ಬಂದಿಳಿಯಲಿರುವ ಅಮಿತ್ ಶಾ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ನಾಳೆ ಮೈತ್ರಿ ಪಕ್ಷದ ಪ್ರಮುಖರ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ಮುಗಿಸಿ ಮೈತ್ರಿ ಪಕ್ಷದ ಪ್ರಮುಖರ ಜೊತೆ ಅಮಿತ್ ಶಾ ಕ್ಲಸ್ಟರ್ವಾರ್ ಸಭೆ ನಡೆಸಲಿದ್ದಾರೆ. ಬಳಿಕ ನಾಯಕರ ಜೊತೆ ಗ್ರೌಂಡ್ ರಿಪೋರ್ಟ್ ಬಗ್ಗೆ ಶಾ ಸಮಾಲೋಚನೆ ಮಾಡಿ ಮಧ್ಯಾಹ್ನ 12 ಗಂಟೆಗೆ ಬೂತ್ ಪ್ರಮುಖರ ಸಭೆಯಲ್ಲಿ ಭಾಗಿಯಾಗಿ ಮಧ್ಯಾಹ್ನ 3 ಗಂಟೆಗೆ ಖಾಸಗಿ ಹೊಟೇಲ್ನಲ್ಲಿ ಕೋರ್ ಕಮಿಟಿ ಸಭೆ ನಡೆಸಿ,ಅಸಮಾಧಾನಿತರಿರುವ ಕ್ಷೇತ್ರದ ಕುರಿತು ಮಾಹಿತಿ ಪಡೆಯುವ ಶಾ ಕ್ಷೇತ್ರದ ಹತ್ತು ಹಲವು ಸಮಸ್ಯೆ ಬಗ್ಗೆ ಅಮಿತ್ ಶಾ ಸುದೀರ್ಘ ಚರ್ಚೆ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಪರವಾಗಿ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ಚನ್ನಪಟ್ಟಣದಲ್ಲಿ 1.5 ಕಿ.ಮೀ ಉದ್ದ ಬೃಹತ್ ರೋಡ್ ಶೋ ನಡೆಸಲಿರುವ ಅಮಿತ್ ಶಾಗೆ ಬಿಜೆಪಿ-ಜೆಡಿಎಸ್ ನಾಯಕರು ಸಾಥ್ ನೀಡಿಲಿದ್ದಾರೆ. ನಾಳೆ ಸಂಜೆ 6 ಗಂಟೆಗೆ ಚನ್ನಪಟ್ಟಣದ ಮೈತ್ರಿ ಸಮಾವೇಶದಲ್ಲಿ ಭಾಗವಹಿಸಲಿರುವ ಅಮಿತ್ ಶಾ, ಮತಯಾಚನೆ ಮಾಡಲಿದ್ದಾರೆ. ಈ ಮೂಲಕ 10 ಜಿಲ್ಲೆಯ ಅಭ್ಯರ್ಥಿಗಳಿಗೆ ಚಾಣಾಕ್ಯ ಬೂಸ್ಟ್ ನೀಡಲಿದ್ದಾರೆ.
ಡಿಕೆ ಬ್ರದರ್ಸ್ನ ಕಟ್ಟಿ ಹಾಕಲು ಕೇಸರಿ ಪಾಳಯ ತಂತ್ರ ರಣತಂತ್ರಗಳನ್ನ ಹೂಡಿದ್ದು ಅಮಿತ್ ಶಾ ಮೂಲಕ ಠಕ್ಕರ್ ನೀಡಲು ಸಜ್ಜಾಗಿದೆ.. ಬೆಂಗಳೂರು ಗ್ರಾಮಾಂತರದ ಮೂಲಕವೇ ಕರುನಾಡ ಲೋಕ ಅಖಾಡಕ್ಕೆ ಎಂಟ್ರಿಯಾಗಲು ಸಜ್ಜಾಗಿದ್ದಾರೆ.. ಡಿಕೆ ಸುರೇಶ್ ನೀಡಿದ್ದ ವಿಭಜನೆ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸುವ ಸಾಧ್ಯತೆಯೂ ಇದೆ.
ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂ. ಗ್ರಾಮಾಂತರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಒಳಗೊಂಡು ಸಮಾವೇಶ ಮಾಡಲಿದ್ದಾರೆ. ನಾಡಿದ್ದು ಮಧ್ಯಾಹ್ನ 2 ರಿಂದ 4ಗಂಟೆವರೆಗೂ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರದ ಪ್ರಮುಖರ ಸಭೆ ನಡೆಸುವ ಮೂಲಕ ಚುನಾವಣೆ ಗೆಲುವಿಗೆ ರಣತಂತ್ರ ಮಾಡಲಿದ್ದಾರೆ.
ಬೆಂಗಳೂರಿನಲ್ಲಿ ಸಮಾವೇಶದ ಬಳಿಕ ಸಂಜೆ 6ಗಂಟೆಗೆ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿ ಬಹಿರಂಗ ಸಮಾವೇಶ ನಡೆಸಲಿದ್ದಾರೆ. ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ್ ಪರವಾಗಿ ಮತಯಾಚನೆ ಮಾಡಲಿರುವ ಅಮಿತ್ ಶಾಗೆ ಹೆಚ್‌ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ, ವಿಜಯೇಂದ್ರ, ಅಶೋಕ್ ಸೇರಿದಂತೆ ಬಿಜೆಪಿ, ಜೆಡಿಎಸ್ ಸ್ಥಳೀಯ ನಾಯಕರು ಸಾಥ್ ನೀಡಲಿದ್ದಾರೆ.