ಮದುವೆ ಎಂಬುದು ಈ ಕಾಲದಲ್ಲಿ ಬಲು ದುಬಾರಿ ಕಾರ್ಯಕ್ರಮ. ಜೀವನದಲ್ಲಿ ಒಮ್ಮೆ ಮಾತ್ರ ಆಗುವ ಈ ಬಂಧಕ್ಕೆ ಒಂದಲ್ಲ ಒಂದು ರೀತಿಯಾಗಿ ಸ್ಪೆಷಲ್ ಪ್ಲಾನ್ ಮಾಡೇ ಮಾಡ್ತಾರೆ. ಕೆವೊಂದು ಕಡೆ ವಿವಾಹ ವೆಚ್ಚವನ್ನು ಉಳಿಸಲು ಮನೆಯಲ್ಲಿರುವ ಸಹೋದರರ ಅಥವ ಸಹೋದರಿಯರ ವಿವಾಹವನ್ನು ಒಟ್ಟಿಗೆ ಮಾಡಿಸುತ್ತಾರೆ. ಆದರೆ, ಇಲ್ಲೊಬ್ಬ ಅಜ್ಜ ತನ್ನ ಮೊಮ್ಮಕ್ಕಳ ವಿವಾಹವನ್ನು ಏಕಕಾಲಕ್ಕೆ ಮಾಡಿ ಮುಗಿಸಿದ್ದಾರೆ. ಅಸಲಿಗೆ ಹಸೆಮಣೆ ಏರಿದ ಜೋಡಿಯ ಸಂಖ್ಯೆ ಅಚ್ಚರಿ ಮೂಡಿಸುವಂತಿದೆ. ಅಜ್ಜನ ನೇತೃತ್ವದಲ್ಲಿ ಬರೋಬ್ಬರಿ 17 ಮೊಮ್ಮಕ್ಕಳು ತಮ್ಮ ಸಂಗಾತಿಯ ಜೊತೆಗೆ ಸಪ್ತಪದಿ ತುಳಿದಿದ್ದಾರೆ..!
ಇದನ್ನ ಕೇಳಲು ವಿಸ್ಮಯವೆನಿಸಿದ್ರು, ನಿಜವಾಗಿಯೂ ನಡೆದ ಘಟನೆ ಇದು. ರಾಜಸ್ಥಾನದ ಬಿಕಾನೇರ್ನಲ್ಲಿ ಈ ರೀತಿಯ ವಿಚಿತ್ರ ಮದುವೆ ಕಾರ್ಯಕ್ರಮ ನಡೆದಿದೆ. ನೂರಾರು ಬಂಧುಗಳು ಈ ವಿಶೇಷ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ. ಬಿಕಾನೇರ್ ಜಿಲ್ಲೆಯ ನೋಖಾ ಮಂಡಲದ ಲಾಲ್ಮದೇಸರ್ ಗ್ರಾಮದ ಸುರ್ಜಾರಾಮ್ ಗೋದಾರ್ ಮೊಮ್ಮಕ್ಕಳ ಮದುವೆ ಮಾಡಿಸಿದ ಅಜ್ಜಪ್ಪ. ಈತ ಆ ಗ್ರಾಮದ ಮುಖ್ಯಸ್ಥನೂ ಹೌದು.
ಈ ಅಜ್ಜನದು ಅವಿಭಕ್ತ ಕುಟುಂಬವಾಗಿದ್ದೂ, ತನ್ನ ಮಕ್ಕಳು, ಅವರ ಮಕ್ಕಳು (ಮೊಮ್ಮಕ್ಕಳು), ಮೊಮ್ಮಕ್ಕಳ ಮಕ್ಕಳು (ಮರಿಮಕ್ಕಳು) ಜೊತೆಯಾಗಿಯೇ ಜೀವನ ನಡೆಸುತ್ತಿದ್ದಾರೆ. ವಯಸ್ಸಿಗೆ ಬಂದ ಮೊಮ್ಮಕ್ಕಳಿಗೆ ಮದುವೆ ಮಾಡಿಸುವ ವಿಚಾರ ಬಂದಾಗ, ಕೂಡುಕುಟುಂಬ ಇರುವ ಕಾರಣ ಪ್ರತ್ಯೇಕವಾಗಿ ಅಲ್ಲದೇ ಒಂದೇ ಬಾರಿಗೆ ವಿವಾಹ ಮಾಡಿಸುವ ಯೋಜನೆ ರೂಪಿಸಿದ್ದಾರೆ.
ಸುರ್ಜಾರಾಮ್ ಅವರು ತನ್ನ 17 ಮೊಮ್ಮಕ್ಕಳ ವಿವಾಹವನ್ನು ಒಂದೇ ಬಾರಿಗೆ ಮಾಡಿ ಮುಗಿಸಲು ನಿರ್ಧರಿಸಿದ್ದರು. ಜೊತೆಗೆ ಒಂದೇ ಆಮಂತ್ರಣ ಪತ್ರವನ್ನು ಸಿದ್ಧಪಡಿಸಿದ್ದಾರೆ. ಬಳಿಕ ಬಂಧುಗಳಿಗೆ ಅದನ್ನು ನೀಡಿ, ಸೋಮವಾರ ಅಂದ್ರೆ ಏಪ್ರಿಲ್ 1 ರಂದು ಐವರು ಮೊಮ್ಮಕ್ಕಳ ಮದುವೆ ಮಾಡಿಸಿದ್ದಾರೆ. ಮರುದಿನ ,ಏಪ್ರಿಲ್ 2 ರಂದು ಉಳಿದ 12 ಮೊಮ್ಮಕ್ಕಳ ವಿವಾಹ ಕಾರ್ಯಕ್ರಮವನ್ನು ಅದ್ದೂರಿಯಾಗೇ ಮುಗಿಸಿದ್ದಾರೆ. ಈ ಘಟನೆ ಸ್ಥಳೀಯವಾಗಿ ಭಾರೀ ಗಮನ ಸೆಳೆದಿದೆ. ಒಂದೇ ಮನೆಯಲ್ಲಿ ಸಾಮೂಹಿಕ ವಿವಾಹ ನಡೆಯುತ್ತಿರುವುದು ಇದೇ ಭಾಗದಲ್ಲಿ ಇದೇ ಮೊದಲು ಎನ್ನುತ್ತಾರೆ ಸ್ಥಳೀಯರು.
ಡಯಾನ ಹೆಚ್ ಆರ್ ಫ್ರೀಡಂ ಟಿವಿ