ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ದೀಪ ಬೆಳಗಿಸುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಶ್ರೀ, ಗೋ.ರು.ಚನ್ನಬಸಪ್ಪ, ಸಚಿವರಾದ ಚಲುವರಾಯಸ್ವಾಮಿ, ಮಹದೇವಪ್ಪ, ಶಿವರಾಜ್ ತಂಗಡಗಿ, ಸಭಾಧ್ಯಕ್ಷ ಯು.ಟಿ.ಖಾದರ್, ಸಾಹಿತಿ ಚಂದ್ರಶೇಖರ ಕಂಬಾರ, ಶಾಸಕರು ಸೇರಿದಂತೆ ಹಲವರು ಭಾಗಿಯಾಗಿದ್ದರು.

ಸಮ್ಮೇಳನದ ಮಹಾದ್ವಾರಗಳು, ಪ್ರವೇಶದ್ವಾರ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆಗಳಿಗೆ ಶಾಸಕರು ಮತ್ತು ಸಚಿವರು ಚಾಲನೆ ನೀಡಿದರು. “ಹೊಂಬಾಳೆ ಅರಳಿಸಿ ಕನ್ನಡ ನುಡಿ ಅರಳಲಿ” ಎಂಬ ಆಶಯದೊಂದಿಗೆ ಈ ಬಾರಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನದಲ್ಲಿ ಶಾಸಕ ನರೇಂದ್ರಸ್ವಾಮಿ ಸಂವಿಧಾನ ಪೀಠಿಕೆ ಬೋಧಿಸಿದರು.

ಸಕ್ಕರೆ ನಾಡು ಮಂಡದಲ್ಲಿ ಮೂವತ್ತು ವರ್ಷಗಳ ನಂತರ ಮತ್ತೊಮ್ಮೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ದಿನಗಳ ಕಾಲ ಮಂಡ್ಯದಲ್ಲಿ ನಡೆಯುತ್ತಿದೆ. ನುಡಿಜಾತ್ರೆಯನ್ನು ಸಾಕಷ್ಟು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ.

ಮೆರವಣಿಗೆ ಮುಖಾಂತರ ವೇದಿಕೆಗೆ ಗೌರವಾಧ್ಯಕ್ಷರ ಆಗಮನ

ಸಮ್ಮೇಳನದ ಗೌರವಾಧ್ಯಕ್ಷ ಗೊರಾ ಚನ್ನಬಸಪ್ಪ ಅವರನ್ನು ಮಂಡ್ಯದ ಸರ್​ ಎಂ ವಿಶ್ವೇಶ್ವರ ಅವರ ಪ್ರತಿಮೆ ಮುಂಭಾಗದಿಂದ ಸಾಹಿತ್ಯ ಸಮ್ಮೇಳನದ ವೇದಿಕೆಯವರೆಗೂ ಬೃಹತ್ ಮೆರವಣಿಗೆ ಮುಖಾಂತರ ಕರೆದುಕೊಂಡ ಬರಲಾಯಿತು.

ಸಾಹಿತ್ಯ ಸಮ್ಮೇಳನ ಸಂಬಂಧ ನಗರದಾದ್ಯಂತ ದಸಾರ ಮಾದರಿಯಲ್ಲಿ ಲೈಟಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ. ಇನ್ನು ಸಾಹಿತ್ಯಸಕ್ತರಿಗಾಗಿ 450 ಪುಸ್ತಕ ಮಳಿಗೆಗಳು ಹಾಗೂ 350 ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ನುಡಿಹಬ್ಬಕ್ಕೆ ಲಕ್ಷಾಂತರ ಜನರು ಭಾಗಿಯಾಗುವ ಹಿನ್ನೆಲೆಯಲ್ಲಿ ಬಗೆ ಬಗೆಯ ಖಾದ್ಯಗಳನ್ನು ಕೂಡ ತಯಾರಿ ಮಾಡಲಾಗಿದೆ. ಉಪಹಾರ ಹಾಗೂ ಊಟಕ್ಕಾಗಿ 150 ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರಿಗೂ ಒಂದೇ ಮೆನು ಮಾಡಲಾಗಿದೆ.

ಊಟದ ಮೆನು

ಮೊದಲ ದಿನ ತಿಂಡಿಗೆ ತಟ್ಟೆ ಇಡ್ಲಿ, ವಡೆ, ಚಟ್ನಿ, ಸಾಂಬರ್, ಉಪ್ಮ, ಮೈಸೂರು ಪಾಕ್ ಇತ್ತು. ಮಧ್ಯಾಹ್ನ ಊಟಕ್ಕೆ ಕಾಯಿ ಹೋಳಿಗೆ, ತುಪ್ಪ, ಜೋಳದ ರೊಟ್ಟಿ, ಬದನೆಕಾಯಿ ಎಣಗಾಯಿ, ಚಟ್ನಿಪುಡಿ, ಮೆಂತ್ಯ ಬಾತ್, ಅನ್ನ, ಮೊಳಕೆ ಕಾಳು ಸಾಂಬರ್, ಬಾಳೆಹಣ್ಣು, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ, ಸಾಲಡ್ ಇದೆ. ರಾತ್ರಿ ಊಟಕ್ಕೆ ಪೂರಿ-ಸಾಗು, ಮೈಸೂರು ಪಾಕ್, ಅವರೆ ಕಾಳು ಬಾತ್, ರಾಯಿತ, ಮೊಸರು, ಬಾಳೆಹಣ್ಣು, ಕೋಸಂಬರಿ, ಪಲ್ಯ, ಉಪ್ಪಿನಕಾಯಿ, ಹಪ್ಪಳ, ಸಾಲಡ್ ಇರಲಿದ್ದು ಈಗಾಗಲೇ ನೂರಾರು ಬಾಣಸಿಗರು ಅಡುಗೆ ತಯಾರಿಯಲ್ಲಿ ಪಾಲ್ಗೊಂಡಿದ್ದಾರೆ.

ಪೊಲೀಸ್​ ಬಂದೋಬಸ್ತ್​​

ದಕ್ಷಿಣ ವಲಯ ಡಿಐಜಿ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. 14 ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ನಾಲ್ವರು ಎಸ್​​ಪಿ, ಆರು ಮಂದಿ ಎಸ್​ಪಿ, 21 ಮಂದಿ ಡಿವೈಎಸ್​ಪಿ, 63 ಮಂದಿ ಪಿಐ, 190 ಮಂದಿ ಪಿಎಸ್​ಐ, 215 ಮಂದಿ ಎಎಸ್​ಐ, 1700 ಮಂದಿ ಹೆಚ್​ಸಿ, ಪಿಸಿ, 165 ಮಂದಿ ಮಹಿಳಾ ಪೇದೆ, 1000 ಮಂದಿ ಗೃಹರಕ್ಷಕ ದಳ, 12 ಕೆಎಸ್​ಆರ್​ಪಿ, 13 ಡಿಎಆರ್​ ಸೇರಿ ನಾಲ್ಕು ಸಾವಿರ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

ಪಾರ್ಕಿಂಗ್​ ವ್ಯವಸ್ಥೆ

ಅಲ್ಲದೇ ಇಪ್ಪತ್ತು ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಎಕ್ಸ್​ಪ್ರೆಸ್ ವೇನಲ್ಲಿ ಮಾರ್ಗ ಬದಲಾವಣೆ ಕೂಡ ಮಾಡಲಾಗಿದೆ. ಜೊತೆಗೆ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಉಚಿತ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಇದೇ ಮೊದಲ ಬಾರಿಗೆ ಪೊಲೀಸ್ ಬ್ಯಾಂಡ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Leave a Reply

Your email address will not be published. Required fields are marked *

Verified by MonsterInsights