ರಾಜಕೀಯರಾಜ್ಯಸುದ್ದಿ

ನನ್ನ ಟಿಕೆಟ್‌ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ: ಜಿಗಜಿಣಗಿ

 

ವಿಜಯಪುರ : ವಿಜಯಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಇನ್ನೆರಡು ದಿನಗಳಲ್ಲಿ ಘೋಷಣೆಯಾಗುತ್ತದೆ.ನಾನು ಟಿಕೆಟ್ ಆಕಾಂಕ್ಷಿಯಲ್ಲ, ಟಿಕೆಟ್ ನನಗೆ ಸಿಗುತ್ತದೆ. ಈ‌ ಬಗ್ಗೆ ನನಗೆ ಮತ್ತು ಜಿಲ್ಲಾಧ್ಯಕ್ಷರಿಗೆ ಎಲ್ಲಿಂದ ಸಂದೇಶ ಬರಬೇಕು ಅಲ್ಲಿಂದ ಬಂದಿದೆ.ನನ್ನ ಟಿಕೆಟ್ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ, ಅದು ದೇವರಿಗೆ ಮಾತ್ರ ಸಾಧ್ಯ ಎಂದು ಲೋಕಸಭಾ ಟಿಕೇಟ್ ವಿಚಾರವಾಗಿ ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜಕೀಯವಾಗಿ ನನ್ನ ವಿರೋಧ ಮಾಡಿದವರು ಸಾವನ್ನಪ್ಪಿದ್ದಾರೆ, ಅವರಿಗೆ ದೇವರೇ ಶಿಕ್ಷೆ ನೀಡಿದ್ದಾನೆಂದು ನಿನ್ನೆ ವಿಜಯಪುರ ನಗರದಲ್ಲಿ ಮಾತನಾಡಿದ್ದ ಸಂಸದ ರಮೇಶ ಜಿಗಜಿಣಗಿ ತಮ್ಮ ಹೇಳಿಕೆ ಇಂದು ಸಮರ್ಥಿಸಿಕೊಂಡರು. ಬೇಕಾದಷ್ಟು ಹಣವಿದ್ದವರು ಹಣ ಕೊಡುತ್ತೇವೆಂದು ತಿರುಗಾಡಲಿ, ಅದು ಕೆಲಸಕ್ಕೆ ಬರಲ್ಲ, ಇದು ಗಟ್ಟಿ. ಯಾರೂ ಏನೂ ಮಾಡಲಾಗಲ್ಲ. ರಾಜಕೀಯವಾಗಿ ನನಗೆ ವಿರೋಧ ಮಾಡಲು ಬಂದವರು ಯಾರೂ ರಾಜಕೀಯವಾಗಿ ಉಳಿದಿಲ್ಲ ಎಂದು ಪುನರುಚ್ಚರಿಸಿದ ಜಿಗಜಿಣಗಿ, ನನಗೆ 71 ವರ್ಷ ನಾನು ಉಳಿದಿದ್ದೇನಲ್ಲಾ ಅವರು ಒಬ್ಬರಾದರೂ ಇದ್ದಾರಾ? ಅದು ದೇವರು ಕೊಟ್ಟ ಶಿಕ್ಷೆ ಯಾರು ಏನು ಮಾಡಲಾಗಲ್ಲ ಎಂದರು.

ನರೇಂದ್ರ ಮೋದಿ ಅವರಿಗೆ ಹೇಗೆ ದೈವಿಶಕ್ತಿ ಇದೆಯೋ ಹಾಗೆ ವಿಜಯಪುರದಲ್ಲಿ ರಮೇಶ್ ಜಿಗಜಿಣಗಿಗೂ ದೇವಿ ಶಕ್ತಿ ಇದೆ. ಈಗ ನಿಮಗೆ ಗೊತ್ತಾಗಲ್ಲ. ಸಮಯ ಹತ್ತಿರ ಬಂದಾಗ ನಿಮಗೆ ಗೊತ್ತಾಗುತ್ತದೆ. ನಾನು ಇತಿಹಾಸ ನಿರ್ಮಾಣ ಮಾಡೇ ಮಾಡುತ್ತಾನೆ ಆದರೆ ಅದನ್ನು ಹೇಳಲು ಆಗದು. ಇಲ್ಲಿವರೆಗೂ ಇತಿಹಾಸ ನಿರ್ಮಾಣ ಮಾಡಿಕೊಂಡು ಬಂದಿದ್ದೇನೆ. ರಾಜ್ಯದಲ್ಲಿ ದಲಿತನಾಗಿ ಯಾರು ಮಾಡಲಾರದಂತ ಕೆಲಸ ಮಾಡಿದ್ದೇನೆ. ಬೇರೆ ಬೇರೆ ಪಕ್ಷದಿಂದ ಚಿಕ್ಕೋಡಿಯಲ್ಲಿ ಮೂರು ಬಾರಿ ಲೋಕಸಭಾ ಚುನಾವಣೆ ಗೆದ್ದಿದ್ದೇನೆ. ಇದು ಇತಿಹಾಸ ಅಲ್ಲವಾ ಎಂದು ಪ್ರಶ್ನೆ ಮಾಡಿದ ಸಂಸದ ಜಿಗಜಿಣಗಿ, ಮುಂದಿನ ಯಾವುದೋ ಒಂದು ಸಂದರ್ಭದಲ್ಲಿ ರಾಜ್ಯದಲ್ಲಿ ಇತಿಹಾಸ ನಿರ್ಮಾಣ ಮಾಡಿಸುತ್ತೇನೆ ಎಂದರು.

ದಲಿತ ಸಿಎಂ ವಿಚಾರವಾಗಿ ಅವರು ಮಾತನಾಡಿ,ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಈ ವಿಚಾರ ಬೇಡ. ಚುನಾವಣೆ ಮುಗಿದ ನಂತರ ಅದರ ಬಗ್ಗೆ ಸ್ಪಷ್ಟವಾಗಿ ಹೇಳುವೆ ಎಂದರು. ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಹಾಲಿ ಸಂಸದ ರಮೇಶ್ ಜಿಗಜಿಣಗಿ ಹಾಗೂ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಧ್ಯೆ ಫೈಟ್ ವಿಚಾರ ಕುರಿತು ಪ್ರತಿಕ್ರಿಯಿಸಿ, ಕಾರಜೋಳ ಜೊತೆ ನನ್ನ ಕಾಂಪಿಟೇಶನ್ ಇಲ್ಲ. ಕಾರಜೋಳ ನನ್ನ ಕಾಂಪಿಟೇಟರಾ ಎಂದು ಪ್ರಶ್ನಿಸಿದರು. ನಾನು ಬೆಳೆಸಿದ ಮನುಷ್ಯ ಹೇಗೆ ನನಗೆ ಕಾಂಪಿಟೇಟರ್ ಆಗುತ್ತಾರೆ.
ಹಣ ಇದ್ದ ಮಾತ್ರಕ್ಕೆ ಕಾಂಪಿಟೇಟರ್ ಆಗಿ ಬಿಡುತ್ತಾರಾ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು. ನಾನು ಬಡ ಮನುಷ್ಯ ನಿಮ್ಮಂಥವರನ್ನ ಕಟ್ಟಿಕೊಂಡು ರಾಜಕಾರಣ ಮಾಡುವವನು. ಅವರು ಟಿಕೆಟ್ ಕೇಳಿರಬಹುದು ಆದರೆ ನನಗೆ ಗೊತ್ತಿಲ್ಲ, ನನ್ನ ಪರವಾಗಿ ಕೇಂದ್ರಕ್ಕೆ ಕಾರಜೋಳ ಪತ್ರ ಬರೆದಿದ್ದು ಗೊತ್ತಿಲ್ಲ. ನಾನೇನು ಅವರಿಗೆ ಪತ್ರ ಬರೆಯಲು ಹೇಳಿದ್ದೇನಾ? ನೀವು ಬರಿ ಎಂದು ಹೇಳಿದ್ರಾ? ತಾವೇ ಪತ್ರ ಬರೆದುಕೊಂಡು ಹೋದರೆ ನಾನೇನು ಮಾಡಲಿ ಎಂದು ಹೇಳಿಕೆ‌ ನೀಡಿದರು.

Comments (0)

Your email address will not be published. Required fields are marked *

Back to top button