ವಿಜಯಪುರ : ದೇಶದಲ್ಲೇ ಏನೇ ನಡೆದರೂ ಹೋರಾಟಕ್ಕಿಳಿಯುವ ಸಂಘಟನೆಗಳು ಕಾಂಗ್ರೆಸ್ ಸರ್ಕಾರ ದಲಿತರಿಗೆ ಮೀಸಲಿಟ್ಟಿದ್ದ ಹಣ ದುರುಪಯೋಗಪಡಿಸಿಕೊಂಡರೂ ಯಾವುದೇ ಹೋರಾಟ ಬಿಡಿ, ಈ ಬಗ್ಗೆ ಸರ್ಕಾರವನ್ನು ಪ್ರಶ್ನೆ ಕೂಡ ಮಾಡುತ್ತಿಲ್ಲ. ದಲಿತ ಸಂಘಟನೆಗಳು ಎಲ್ಲಿವೆ ಹುಡುಕಿಕೊಡಿ ಎಂದು ಎಂಎಲ್ಸಿ ಹಾಗೂ ರಾಜ್ಯ ಬಿಜೆಪಿ ವಕ್ತಾರ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ಸಿಗರು ಯಾವ ರೀತಿ ತೊಂದರೆ ಕೊಟ್ಟರು ಎಂಬುದು ಇಡಿ ಜಗತ್ತಿಗೆ ಗೊತ್ತು. ದಲಿತರನ್ನು ಸಿಎಂ ಮಾಡುವುದಾಗಿ ಕೇವಲ ಭಾಷಣದಲ್ಲಿ ಹೇಳುತ್ತಿದ್ದಾರೆ. ದಲಿತರ ಬಗ್ಗೆ ಇಷ್ಟೆಲ್ಲಾ ಮಾತನಾಡುವ ಸಿಎಂ ಹಾಗೂ ಕಾಂಗ್ರೆಸ್ ನಾಯಕರು ದಲಿತರಿಗೆ ಮೀಸಲಿಟ್ಟಿದ್ದ ಎಸ್‌ಇಪಿ, ಟಿಎಸ್‌ಪಿ 25 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಯಾಕೆ ಬಳಸಿದ್ದಾರೆ. ಇದರ ಬಗ್ಗೆ ಯಾವುದೇ ಸಂಘಟನೆಗಳು ಮಾತನಾಡುತ್ತಿಲ್ಲ. ಎಲ್ಲದಕ್ಕೂ ಹೋರಾಟ ಮಾಡುವ ಸಂಘಟನೆಗಳು ಈ ವಿಚಾರದಲ್ಲಿ ಯಾಕೆ ಸುಮ್ಮನಾಗಿವೆ ಎಂದು ಅವರು ಪ್ರಶ್ನಿಸಿದರು.
ಇನ್ನು ಸಂವಿಧಾನ ಬದಲಾವಣೆ ಎಂಬ ಅನಂತಕುಮಾರ ಹೆಗ್ಡೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ನಾರಾಯಣಸ್ವಾಮಿ, ಸಂವಿಧಾನ ಬದಲಾವಣೆ ಮಾಡುವ ಬಗ್ಗೆ ಮಾತಾಡುವ ಇಂಥವರಿಗೆ ಟಿಕೆಟ್ ನೀಡಬಾರದು. ಬದಲಾಗಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರಲ್ಲದೇ, ಸಂವಿಧಾನದ ವಿಚಾರದಲ್ಲಿ ನಮ್ಮದು ಯಾರ ಜೊತೆಗೂ ಹೊಂದಾಣಿಕೆ ಇಲ್ಲ. ನಮ್ಮ ಪಕ್ಷವೇ ಇರಲಿ, ಬೇರೆ ಪಕ್ಷವೇ ಇರಲಿ, ಸಂವಿಧಾನದ ವಿಚಾರದಲ್ಲಿ ನಮ್ಮದು ಹೊಂದಾಣಿಕೆ ಇಲ್ಲ. ಸಂವಿಧಾನ ತಿದ್ದುಪಡಿ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂಬುದಕ್ಕೆ ನನ್ನ ಆಕ್ಷೇಪವಿದೆ. ಸಂವಿಧಾನ ಬದಲಾವಣೆ ವಿಚಾರವಾಗಿ ಹೇಳಿಕೆ ನೀಡಿ ಸಂಸದ ಅನಂತಕುಮಾರ ಹೆಗ್ಡೆ ಸಚಿವ ಸ್ಥಾನ ಕಳೆದುಕೊಂಡರು. ನಾವೂ ಹಿಂದೆಯೂ ಅವರ ಹೇಳಿಕೆಗೆ ವಿರೋಧಿಸಿ ಕೇಂದ್ರ ನಾಯಕರಿಗೆ ದೂರು ನೀಡಿದ್ದೆವು ಎಂದರು.
ನಾವು ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ 25 ಸ್ಥಾನಗಳ ಜೊತೆಗೆ ಬೆಂಬಲಿತ ಮಂಡ್ಯ ಕ್ಷೇತ್ರ ಸೇರಿ ಒಟ್ಟು 26 ಕ್ಷೇತ್ರಗಳಲ್ಲಿ ಗೆದಿದ್ದೇವು. ಆದರೆ ಕಳೆದ ಬಾರಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಯಲ್ಲಿ ಬೆಂಗಳೂರು ಗ್ರಾ. ಹಾಗೂ ಹಾಸನ ಸೇರಿ ಕೇವಲ 2 ಕ್ಷೇತ್ರಗಳಲ್ಲಿ ಗೆದ್ದಿದ್ದವು. ಈ ಬಾರಿ ಜೆಡಿಎಸ್ ನಮ್ಮೊಂದಿಗೆ ಕೈಜೋಡಿಸಿದ್ದು ನಮ್ಮದು 27 ಕ್ಷೇತ್ರಗಳಾಗಿವೆ. ಈ ಬಾರಿ ಅಂತರರಾಷ್ಟ್ರೀಯ ಖ್ಯಾತ ವೈದ್ಯ ಡಾ.ಮಂಜುನಾಥ್ ಅವರು ಬೆಂಗಳೂರು ಗ್ರಾ. ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕಾರಣ ಕಾಂಗ್ರೆಸ್ ಸದ್ಯ ಆ ಒಂದು ಕ್ಷೇತ್ರವನ್ನು ಉಳಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಈ ಬಾರಿ ಬೆಜೆಪಿ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.