ರಾಜ್ಯಶಿಕ್ಷಣಸುದ್ದಿ

ವಿಜಯಪುರ ನಗರದ ಶತಮಾನ ಕಂಡ ಸರ್ಕಾರಿ ಶಾಲೆಯ ದುಸ್ಥಿತಿ

ವಿಜಯಪುರ :  ನಗರದ ಹೃದಯಭಾಗ ಗಾಂಧಿವೃತ್ತದಲ್ಲಿರುವ ನಮ್ಮ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂಬರ್ 1.1906 ರಲ್ಲಿ ಆರಂಭವಾಗಿರುವ ಈ ಹಳೆಯ ಶಾಲೆ ಎಲ್​ಕೆಜಿ ಇಂದ 7 ನೇ ತರಗತಿ ವರೆಗೆ ಒಟ್ಟು 275 ಕ್ಕೂ ಅಧಿಕ ವಿದ್ಯಾರ್ಥಿನಿಯರು ಇಲ್ಲಿ ಓದುತ್ತಿದ್ದಾರೆ. ಈ ಶಾಲೆ ಹಲವಾರು ಮೂಲಭೂತ ಸೌಕರ್ಯಗಳಿಲ್ಲದೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಆಶ್ಚರ್ಯವೆಂದರೆ ಅಲ್ಲಿರುವ 275 ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಇರೋದು ಒಂದೇ ಶೌಚಾಲಯ. ಮಕ್ಕಳು ಸರದಿಯಲ್ಲಿ ನಿಂತು ಶೌಚಾಲಯ ಬಳಸಬೇಕಾದ ದುಸ್ಥಿತಿ ಈ ಶತಮಾನದ ಶಾಲೆಯಲ್ಲಿದೆ.

ಈ ಸಮಸ್ಯೆ ಕುರಿತು ಶಾಲೆಯ ಶಿಕ್ಷಕರು ಹಲವು ಬಾರಿ ಸಿಇಒ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸ್ವಚ್ಚ ಭಾರತ ಅಭಿಯಾನದಡಿ ಮನೆ ಮನೆಗೂ ಶೌಚಾಲಯ ಕಟ್ಟಿ ಕೊಡಲು ಮುಂದಾಗಿರುವ ಸರ್ಕಾರಕ್ಕೆ ಯಾಕೆ ಇಂತಹ ಶಾಲೆಗಳು‌ ಕಾಣಿಸುತ್ತಿಲ್ಲ. ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಪ್ರಚಾರ ಮಾಡುವ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಮೊದಲು ಈ ಸರ್ಕಾರಿ ಶಾಲೆಯ ಶೌಚಾಲಯದ ಪರಿಸ್ಥಿತಿಯನ್ನು ಒಮ್ಮೆ ನೋಡಬೇಕು. ಯಾರಾದರೂ ದಾನಿಗಳಾದರೂ ನಮ್ಮ ವಿದ್ಯಾರ್ಥಿನಿಯರಿಗೆ ಶೌಚಾಲಯ ಕಟ್ಟಿ ಕೊಡಿ ಎಂದು ಶಿಕ್ಷಕರು ಮನವಿ ಮಾಡಿಕೊಳ್ಳುವ ಸ್ಥಿತಿ ಇದೆ.

ಸರ್ಕಾರ ಶಾಲೆಗಳಲ್ಲಿ‌ ಮೂಲಸೌಕರ್ಯಕ್ಕೆ, ಅಭಿವೃದ್ಧಿಗಾಗಿ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆ. ಆದರೆ ಆ ಹಣ ಎಲ್ಲಿ ವ್ಯಯವಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಸರಕಾರ ಮೊದಲು ಇಂತಹ ಸಮಸ್ಯೆಗಳಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ಅಲ್ಲಿನ ಸಮಸ್ಯೆ ಪರಿಹರಿಸುವ ಕೆಲಸ‌ಮಾಡಬೇಕು. ಬಡವರು, ಹಿಂದುಳಿದವರು, ಶ್ರಮಿಕ ವರ್ಗದವರ ಮಕ್ಕಳೇ ಹೆಚ್ಚಾಗಿ ಓದುವ ಈ ನಂಬರ್ 1 ಸರ್ಕಾರಿ‌ ಶಾಲೆಯಲ್ಲಿ‌ ಕೂಡಲೇ ಸಮರ್ಪಕ ಶೌಚಾಲಯಗಳನ್ನು ಕಟ್ಟಬೇಕು. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸರ್ಕಾರ ಹಾಗೂ ಇಲಾಖೆ ಮೂಲಸೌಕರ್ಯಗಳಿಗೆ ಮೊದಲ ಆದ್ಯತೆ ಕೊಡಬೇಕು‌ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Comments (0)

Your email address will not be published. Required fields are marked *

Back to top button