ವಿಜಯನಗರ: ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ತುಂಗಭದ್ರಾ ಜಲಾಶಯದ ನಿರ್ಮಾಣಕ್ಕೆ ತಮ್ಮ ಊರನ್ನೇ ತ್ಯಾಗ ಮಾಡಿದ ಜನಕ್ಕೆ ಇಂದು ಕುಡಿಯಲು ನೀರಿಲ್ಲ.ನೂರಾರು ಕಿ.ಮೀ. ದೂರದ ಪಾವಗಡದ ಜನರ ನೀರಿನ ದಾಹ ತಣಿಸಲು ಶಕ್ತವಾಗಿರುವ ತುಂಗಭದ್ರಾ ಜಲಾಶಯಕ್ಕೆ ಸುತ್ತಲಿನ ಹತ್ತಾರು ಕಿ.ಮೀ ವ್ಯಾಪ್ತಿಯ ಗ್ರಾಮಗಳ ಕುಡಿಯುವ ನೀರಿನ ಕನಸು ನನಸಾಗಿಸಲು ಇದುವರೆಗೂ ಸಾಧ್ಯವಾಗಿಲ್ಲ.
ಜಲಾಶಯದ ಪಕ್ಕದಲ್ಲೇ ಇರುವ ಹಲವು ಕುಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಕನ್ನಡಿಯೊಳಗಿನ ಗಂಟಾಗಿದೆ. ಈ ಊರುಗಳ ಜನಗಳಿಗೆ ಉಪ್ಪು ನೀರು ಸೇವನೆ ತಪ್ಪದಾಗಿದೆ. ಕೂಗಳತೆ ದೂರದಲ್ಲಿ ಜಲರಾಶಿ ಇದ್ದರೂ ಬೊಗಸೆ ನೀರಿಗಾಗಿ ರಸ್ತೆಗಳಿದು ಹೋರಾಡುವ ದುರ್ಗತಿಯಿದೆ. ಇದಕ್ಕೆ ಸಳೀಯ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ, ಸರಕಾರದ ತಾರತಮ್ಯ ಧೋರಣೆಯ ಮೂಲಕಾರಣ ಎಂಬ ಆರೋಪ ಬಲವಾಗಿದೆ.ಮರಿಯಮ್ಮನಹಳ್ಳಿ ತಾಂಡಾ, ಡಣಾಯಕನಕೆರೆ ಗ್ರಾ.ಪಂ. ವ್ಯಾಪ್ತಿಯ ದೇವಲಾಪುರ, ನಂದಿಬಂಡಿ,ಇಂದಿರಾನಗರ, ವೆಂಕಟಾಪುರ, ಹಂಪಿನಕಟ್ಟೆ, ವ್ಯಾಸನಕೆರೆಗ್ರಾಮಗಳಿಗೆ ಪಾವಗಡ ನೀರಿನ ಯೋಜನೆಯಡಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಬೇಕು ಎಂಬ ಕೂಗು ಮತ್ತೆ ಕೇಳಿಬಂದಿದೆ.ಇನ್ನು ಜಲಾಶಯದ ಹಿನ್ನೀರು ಪ್ರದೇಶದ ಬಹುತೇಕ ಗ್ರಾಮಗಳಿಗೆ ಈವರೆಗೆ
ಸಮರ್ಥವಾಗಿ ಕುಡಿಯುವ ನೀರು ಒದಗಿಸುವ ಯಾವುದೇ ಶಾಶ್ವತ ಯೋಜನೆ ಜಾರಿಯಾಗಿಲ್ಲ, ನೀರಿನ ಸಮಸ್ಯೆಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ,
ಜಲಾಶಯದಿಂದ ತಮ್ಮ ಬದುಕುಹಸನಾಗುತ್ತದೆ ಎಂಬ ಉದ್ದೇಶದಿಂದ ಜಲಾಶಯನಿರ್ಮಾಣಕ್ಕೆ ಆಸ್ತಿ ಪಾಸ್ತಿ ಕಳೆದುಕೊಂಡ ಸುತ್ತಲಿನ ನೂರಾರು ಊರುಗಳ ಜನ, ಕುಡಿದ ನೀರಿಗೆ ಪರತಪಿಸುವಂತಾಗಿದೆ, ಪಾವಗಡ ಕುಡಿವ ನೀರಿನ ಯೋಜನೆಯಲ್ಲಿ ಮರಿಯಮ್ಮನಹಳ್ಳಿ ವ್ಯಾಪ್ತಿಯ ಗ್ರಾಮಗಳಿಗೆ ನೀರು ಸರಬರಾಜು ಮಾಡುವಂತೆ ಈ ಭಾಗದ ಜನತೆ ನಿರಂತರ ಹೋರಾಟ ಮಾಡಿದರೂ ಹನಿ ನೀರು ಪಡೆಯುವಲ್ಲಿ ವಿಫಲರಾಗಿದ್ದಾರೆ.