ತುಮಕೂರು: ಗುಬ್ಬಿ ಪೊಲೀಸ್ ಠಾಣೆಯಿಂದ ಕಳ್ಳನೋರ್ವ ಪರಾರಿಯಾದ ಹಿನ್ನೆಲೆಯಲ್ಲಿ ಪಿಎಸ್ಐ ಸೇರಿ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ತುಮಕೂರು ಎಸ್ಪಿ ಅಶೋಕ್ ಕೆ.ವಿ ಅವರು ಆದೇಶ ಹೊರಡಿಸಿದ್ದಾರೆ.
ಗುಬ್ಬಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಸ್ಐ ದೇವಿಕಾ, ಮೂವರು ಹೆಡ್ ಕಾನ್ಸ್ಟೇಬಲ್ಸ್, ಓರ್ವ ಕಾನ್ಸ್ಟೇಬಲ್ ಸೇರಿ ಒಟ್ಟು ಐವರು ಸಸ್ಪೆಂಡ್ ಆಗಿದ್ದಾರೆ. ಡಕಾಯಿತಿ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದ ಆರೋಪಿ ಸೈಯದ್ನನ್ನು ಗುಬ್ಬಿ ಠಾಣೆಗೆ ಸಿಆರ್ ನಂ.13/2024ರ ಪ್ರಕರಣದಲ್ಲಿ ಪೊಲೀಸರು ಕರೆತಂದಿದ್ದರು. ಆದ್ರೆ ಶುಕ್ರವಾರ ಬೆಳಗಿನ ಜಾವ ಠಾಣೆಯಿಂದ ಆರೋಪಿ ಓಡಿ ಹೋಗಿದ್ದಾನೆ. ಈ ವೇಳೆ ಪೊಲೀಸರು ಕರ್ತವ್ಯ ಲೋಪವಾಗಿದೆ ಎಂದು ಐವರನ್ನು ಸಸ್ಪೆಂಡ್ ಮಾಡಲಾಗಿದೆ.
ಎಸ್ಕೇಪ್ ಆಗಿರು ಆರೋಪಿ ಸೈಯದ್ ಗದಗನ ಹುಲ್ಲೂರು ಗ್ರಾಮದ ನಿವಾಸಿಯಾಗಿದ್ದಾನೆ. ಈತ ಡ್ಯಾನ್ಸ್ ಕೋರಿಯಾಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದನು. ಸದ್ಯ ನಾಪತ್ತೆಯಾದ ಆರೋಪಿಗಾಗಿ ಪೊಲೀಸರು 3 ತಂಡ ರಚಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.