ರಾಯಚೂರು: ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಕಂದಾಯ ಇಲಾಖೆ ದಾಖಲೆಗಳನ್ನು ಗಣಕೀರಣಗೊಳಿಸಲು ಯೋಜನೆ ರೂಪಿಸಲಾಗಿದ್ದು, ಮುಂದಿನ ಆರು ತಿಂಗಳಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ 31 ಜಿಲ್ಲೆಗಳ 31 ತಾಲೂಕುಗಳಲ್ಲಿ ಮೊದಲ ಹಂತದಲ್ಲಿ ಕಂದಾಯ ದಾಖಲೆಗಳನ್ನು ಡಿಜಿಲೀಕರಣಗೊಳಿಸುವ ಯೋಜನೆ ರೂಪಿಸಲಾಗಿದೆ. ನಂತರದ ದಿನಗಳಲ್ಲಿ ಎಲ್ಲಾ ತಾಲೂಕುಗಳ ಜಮೀನ ಮುಟ್ಯೇಷನ್ ಸೇರಿದಂತೆ ಭೂ ದಾಖಲೆಗಳು ಡಿಜಿಟಲ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದರು.
ಬೆಳೆ ಸಮೀಕ್ಷೆ ಸೇರಿದಂತೆ ಭೂ ಸರ್ವೆ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು ಶಾಶ್ವತ ಪರಿಹಾರ ಒದಗಿಸಲು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಬರ ಮತ್ತು ಅತಿವೃಷ್ಟಿಯಾದಾಗ ಪರಿಹಾರ ವಿತರಣೆಯಲ್ಲಿ ಸಾಕಷ್ಟು ನೂನ್ಯತೆಗಳಾಗುತ್ತಿರುವ ದೂರುಗಳು ಕೇಳಿಬರುತ್ತಿವೆ. ಯಾರದೋ ಜಮೀನನ ಪರಿಹಾರ ಇನ್ಯಾರಿಗೋ ನೀಡುವುದು, ಹಾನಿಯಾದ ಬೆಳೆಯೇ ಬೇರೆ, ನಷ್ಟ ಇನ್ಯಾವದೋ ಬೆಳೆಯದು ನೀಡಲಾಗುತ್ತಿದೆ. ಬೆಳೆ ಸಮೀಕ್ಷ ನಡೆಸಿದರೂ ಶೇ. 20ರಷ್ಟು ಅರ್ಹರಿಗೆ ಪರಿಹಾರ ದೊರೆಯದೇ ಹೋಗುತ್ತಿರುವ ದೂರುಗಳ ಹಿನ್ನಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಬೆಳೆ ನಷ್ಟ ಪರಿಹಾರ ನೀಡಲು 4663 ಕೋಟಿ ರೂ. ಅವಶ್ಯಕತೆಯಿದೆ. ಕುಡಿಯುವ ನೀರು, ಬೆಳೆನಷ್ಟ ಸೇರಿ ಇತರೆ ಅವಶ್ಯಕತೆಗಳಿಗೆ 18,175 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರಕ್ಕೆ ಕೇಳಲಾಗಿದೆ. ಕೇಂದ್ರ ಇಂದಿಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಿಯಮಗಳನ್ನು ಬದಲಿಸಿ ರೈತರಿಗೆ ವಾಸ್ತವಿಕ ಪರಿಹಾರ ಒದಗಿಸಲು ಪ್ರಧಾನಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಮಾತ್ರ ನಿಯಮಗಳನ್ನು ಪರಿಷ್ಕರಿಸಲು ಅಧಿಕಾರವಿದೆ ಎಂದರು.


