ರಾಯಚೂರು : ದೆಹಲಿಯಿಂದ ಹಿಡಿದು ಬೆಂಗಳೂರಿನವರೆಗೂ ಕಾಂಗ್ರೆಸ್ ಪಕ್ಷ ಗೊಂದಲದಲ್ಲಿದ್ದು, ಆ ಪಕ್ಷದ ನಾಯಕರು ಹಶಾತೆಯಿಂದ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕಿಸಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂತಿಣಿ ಬ್ರಿಡ್ಜ್ನಲ್ಲಿ ಹಮ್ಮಿಕೊಂಡಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದಾಗ ಮಾಧ್ಯಮಗಳೊಂದಿಗೆ ಮಾತನಾಡಿದರು.
ದೇಶ ಮತ್ತು ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಿಂದ ಕಾಂಗ್ರೆಸ್ ಆತಂಕಗೊಂಡಿದೆ. ನುಡಿದಂತೆ ನಡೆದಿದ್ದೇವೆ ಎಂದು ಜಾಹೀರಾತು ನೀಡಿದರೆ ಫಲಾನುಭವಿಗಳಿಗೆ ತಲುಪಿದಂತಲ್ಲ. ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಬರಗಾಲ ಆವರಿಸಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸರ್ಕಾರ ಯಾವ ಪರಿಹಾರವನ್ನು ಬಿಡುಗಡೆಗೊಳಿಸುತ್ತಿಲ್ಲ ಎಂದು ದೂರಿದರು.
ಒಂದುಕಡೆ ಮೂರು ಜನ ಡಿಸಿಎಂ ಮಾಡುತ್ತೇವೆ ಎಂದರೆ ಮತ್ತೊಂದು ಕಡೆ ಮಾಡುವುದಿಲ್ಲ ಎಂದು ಮತ್ತೊಬ್ಬರು ಹೇಳುತ್ತಾರೆ. ಆಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ ಹೋಗುವದಿಲ್ಲ ಎನ್ನುತ್ತಾರೆ, ಮತ್ತೊಬ್ಬರು ಆಹ್ವಾನ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಗೆ ಅಲ್ಪಸಂಖ್ಯಾತರು ಮಾತ್ರ ಮತ ನೀಡಿದ್ದಾರೆ ಎಂಬ ಭ್ರಮೆಯಲ್ಲಿದ್ದು ಎಲ್ಲಿ ಅಲ್ಪಸಂಖ್ಯಾತರ ಓಟುಗಳು ಕೈತಪ್ಪುವ ಆತಂಕದಿAದ ಅಯೋಧ್ಯ ರಾಮಮಂದಿರ ಉದ್ಘಾಟನಾ ಸಮಾರಂಭವನ್ನು ವಿರೋಧಿಸುತ್ತಿದ್ದಾರೆ ಎಂದರು.