ಮೈಸೂರು ; ಲೋಕಸಭೆ ಚುನಾವಣೆಗೆ ಮೈಸೂರು-ಕೊಡುಗು ಕ್ಷೇತ್ರದಿಂದ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯರಿಗೆ ಅವಕಾಶ ನೀಡಿದರೆ ಸಂತೋಷ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಮೈಸೂರಿನಲ್ಲಿ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು, ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಈ ಬಾರಿ ಅಂತಹ ಅವಕಾಶ ಸಿಕ್ಕಿದರೆ ಬಹಳ ಸಂತೋಷ. ಈಗಾಗಲೇ ಸಾಕಷ್ಟು ಜನರು ಆಕಾಂಕ್ಷಿಗಳಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಪರಿಗಣಿಸಿ ಅವಕಾಶ ನೀಡಿದರೆ ಬಿಜೆಪಿ ಪಾಲಾಗಿರುವ ಮೈಸೂರು ಕೊಡುಗು ಲೋಕಸಭಾ ಕ್ಷೇತ್ರವನ್ನ ನಾವು ಸುಲಭವಾಗಿ ಗೆಲ್ಲಬಹುದು. ಬಿಜೆಪಿಗೆ ಸೆಡ್ಡು ಹೊಡೆದು ಕಾಂಗ್ರೆಸ್ ಗೆದ್ದೆ ಗೆಲ್ಲುತ್ತದೆ ಎಂದು ಹೇಳಿದರು.
ಒಂದು ವೇಳೆ ಯತೀಂದ್ರ ಸಿದ್ದರಾಮಯ್ಯ ಟಿಕೆಟ್ ಕೊಟ್ಟರೆ ನಾನು ಅವರ ಗೆಲುವಿಗೆ ಹಗಲಿರುಳು ಶ್ರಮಿಸುತ್ತೇನೆ. ಅವರು ನಮ್ಮ ಆಪ್ತರು ಅವರಿಗೆ ಈ ಬಾರಿ ಒಂದು ಸೂಕ್ತ ಸ್ಥಾನಮಾನ ಅಧಿಕಾರ ಸಿಗಬೇಕು ಎಂಬುದು ನಮ್ಮಆಶಯ ಎಂದು ತಿಳಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರೇ ಸ್ಪರ್ಧೆ ಮಾಡಿದರೂ ಅವರನ್ನ ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ನಾವು ಸಿದ್ದರಿದ್ದೇವೆ. ರಾಜ್ಯದಲ್ಲಿ ನಮ್ಮ ಸರ್ಕಾರದ ಉತ್ತಮವಾಗಿ ಅಧಿಕಾರ ನಡೆಸುತ್ತಿದೆ. ಜನಪರ ಯೋಜನೆಗಳನ್ನ ಜಾರಿಗೆ ತಂದಿದೆ. ನಮ್ಮ ಮುಖ್ಯಮಂತ್ರಿಗಳು ನುಡಿದಂತೆ ನಡೆದುಕೊಂಡು ಬಂದಿದೆ. ಈಗಾಗಲೇ ಪಂಚ ಗ್ಯಾರಂಟಿಗಳ ಸೌಲಭ್ಯಗಳನ್ನು ಜನ ಪಡೆಯುತ್ತಿದ್ದಾರೆ. ಜನ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.