
ಹುಬ್ಬಳ್ಳಿ: ಕರಸೇವಕ ಶ್ರೀಕಾಂತ್ ಪೂಜಾರಿ ಬೆಂಬಲಿಸಿ ಬಿಜೆಪಿ ನಾಯಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು. ಇದೀಗ ಪ್ರತಿಭಟನೆ ನಡೆಸಿದ್ದ 43 ಬಿಜೆಪಿ ನಾಯಕರ ವಿರುದ್ಧ FIR ದಾಖಲಾಗಿದೆ.ಹುಬ್ಬಳ್ಳಿ ಧಾರವಾಡ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ದೂರು ನೀಡಿದ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ.

ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಬಿಜೆಪಿ ಮುಖಂಡರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. 1992ರ ಅಯೋಧ್ಯೆ ರಾಮಮಂದಿರ ಗಲಭೆ ಪ್ರಕರಣದ ಆರೋಪಿ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ, ಜನವರಿ 3ರಂದು ನಗರದ ಶಹರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸೇರಿದಂತೆ 43 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು ಜನವರಿ 5ರಂದು ಶಹರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರು. ಜೊತೆಗೆ ದೂರಿನಲ್ಲಿ ದೂರಿನಲ್ಲಿ ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ಘೋಷಣೆ ಕೂಗಿದ್ದಲ್ಲದೆ, ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಈಗ ಪ್ರತಿಭಟನೆ ಪ್ರಕರಣದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಎ1 ಆರೋಪಿಯಾಗಿದ್ದು, ಶಾಸಕರಾದ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ ಕ್ರಮವಾಗಿ ಎ2, ಎ3 ಆರೋಪಿಯಾಗಿದ್ದಾರೆ.
ಇನ್ನುಳಿದಂತೆ ಎಂ.ಆರ್. ಪಾಟೀಲ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ್, ಶಿವು ಮೆಣಸಿನಕಾಯಿ, ರೂಪಾ ಶೆಟ್ಟಿ, ಉಮೇಶಗೌಡ ಕೌಜಲಗಿ, ತಿಪ್ಪಣ್ಣ ಮಜ್ಜಗಿ ಸೇರಿದಂತೆ ಬಿಜೆಪಿಯ ಇತರ ಮುಖಂಡರ ಹಾಗೂ ಕಾರ್ಯಕರ್ತರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಮುಖ ನಾಯಕರುಗಳ ಮೇಲೆ ಎಫ್ಐಆರ್
A1 ಆರ್ ಅಶೋಕ ( ವಿಪಕ್ಷ ನಾಯಕ)
A2 ಅರವಿಂದ ಬೆಲ್ಲದ್ ( ವಿಪಕ್ಷ ಉಪನಾಯಕ)
A3 ಮಹೇಶ್ ಟೆಂಗಿನಕಾಯಿ ( ಹುಧಾ ಸೆಂಟ್ರಲ್ ಶಾಸಕ)
A7 ಎಮ್.ಆರ್.ಪಾಟೀಲ್ ( ಶಾಸಕ ಕುಂದಗೋಳ)
A8 ಪ್ರದೀಪ್ ಶೆಟ್ಟರ್ ( ವಿಧಾನ ಪರಿಷತ್ ಸದಸ್ಯ)
A9 ಅಶೋಕ ಕಾಟವೆ ( ಮಾಜಿ ಶಾಸಕ)
A18 -ಪ್ರಭು ಕುಂದಗೋಳಮಠ ( ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ)
ಒಟ್ಟು 43 ನಾಯಕರ ವಿರುದ್ಧ IPC U/S 290, 504 ಅಡಿಯಲ್ಲಿ ದೂರು ದಾಖಲಾಗಿದೆ. ರೌಡಿ ಶೀಟರ್ ಶ್ರೀಕಾಂತ್ ಉರ್ಫ ಕಾಂತ್ಯಾ ಪೂಜಾರಿ ಬಂಧನ ವಿರೋಧಿಸಿ ಬಿಜೆಪಿ ಪ್ರತಿಭಟನೆ ಮಾಡಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗಿದೆ. ವ್ಯಾಪಾರಸ್ಥರಿಗೂ ತೊಂದರೆ ಆಗಿದೆ ಎಂದು ದೂರಲಾಗಿದೆ.




