ಬೆಂಗಳೂರು :  ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಕುಮಾರಸ್ವಾಮಿ ಸಚಿವ ಸಂಪುಟಕ್ಕೆ ಸೇರುವ ಸಾಧ್ಯತೆ ದಟ್ಟವಾಗಿದೆ.

ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಎಸ್‌ಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಇರಾದೆ ಬಿಜೆಪಿ ವರಿಷ್ಠರದ್ದಾಗಿದೆ. ರಾಮಮಂದಿರ ಉದ್ಘಾಟನೆ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಐವರು ಹೊಸದಾಗಿ ಸೇರ್ಪಡೆಯಾಗಲಿದ್ದಾರೆ ಮೂಲಗಳು ಹೇಳಿವೆ.

 

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್, ಗೆದ್ದ ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ, ಸಂಪುಟ ದರ್ಜೆಯ ಖಾತೆ ಖಾಲಿ ಇದೆ. ಕೃಷಿ ಖಾತೆಯ ಬಗ್ಗೆ ಕುಮಾರಸ್ವಾಮಿ ಒಲವು ಹೊಂದಿದ್ದು, ಸಂಪುಟಕ್ಕೆ ಸೇರಿದರೆ ಅದೇ ಖಾತೆ ಸಿಗುವ ಸಂಭವ ಇದೆ ಎಂಬ ಚರ್ಚೆಯೂ ನಡೆದಿದೆ. ಕೃಷಿ ಖಾತೆ ರಾಜ್ಯ ಸಚಿವರಾಗಿ ರಾಜ್ಯದವರೇ ಆದ ಶೋಭಾ ಕರಂದ್ಲಾಜೆ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.  ಕುಮಾರಸ್ವಾಮಿ ಕೃಷಿ ಸಚಿವರಾದರೆ, ಶೋಭಾ ಖಾತೆ ಬದಲಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆ ಚರ್ಚೆ ಜೋರಾಗಿ ನಡೆದಿತ್ತು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಕುಮಾರಸ್ವಾಮಿ ಅವರನ್ನು ಕೂರಿಸುವ ಇಂಗಿತ ಪ್ರಧಾನಿ ಮೋದಿ ಅವರದ್ದಾಗಿತ್ತು. ‘ಎರಡು ಬಾರಿ ಮುಖ್ಯಮಂತ್ರಿ, ಒಮ್ಮೆ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ಮತ್ತೆ ವಿರೋಧ ಪಕ್ಷದ ನಾಯಕ ಸ್ಥಾನ ಬೇಡ. ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಿ’ ಎಂದು ಕುಮಾರಸ್ವಾಮಿ, ಬಿಜೆಪಿ ವರಿಷ್ಠರಿಗೆ ಹೇಳಿದ್ದರು. ಆಗ ಬಿಜೆಪಿ ನಾಯಕರು ಅದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.

ನಂತರದ ಬೆಳವಣಿಗೆಯಲ್ಲಿ ಎನ್​​ಡಿಎ ಮೈತ್ರಿಕೂಟದ ಭಾಗವಾಗಿರಲು ಜೆಡಿಎಸ್​​ ನಿರ್ಣಯ ಕೈಗೊಂಡಿತ್ತು. ಎಚ್​.ಡಿ ದೇವೇಗೌಡರು ಕುಟುಂಬ ಸಮೇತರಾಗಿ ಪ್ರಧಾನಿ ಮೋದಿ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದರು. ಅದಾದ ಬಳಿಕ, ಹೊರ ರಾಜಕೀಯ ಬೆಳವಣಿಗೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರದಲ್ಲಿ ಮಂತ್ರಿ ಆಗೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಹೆಚ್​.ಡಿ ಕುಮಾರಸ್ವಾಮಿ ಅವರು, ನಾನು ಯಾವುದರ ಬಗ್ಗೆಯೂ ಚಿಂತೆ ಮಾಡಿಲ್ಲ. ನಮ್ಮ ಗುರಿ ಇರೋದು 28 ಕ್ಕೆ 28 ಸ್ಥಾನ ಗೆಲ್ಲೋದು. ನಮ್ಮ ಅಜೆಂಡಾ ಎಂದರು. ಮಂತ್ರಿಯಾಗಿ ಏನ್​ ಮಾಡ್ತೀರಾ.. ಮಂತ್ರಿ ಆಗೋ ವಿಷಯ ನನಗೆ ಗೊತ್ತಿಲ್ಲ. ಚುನಾವಣೆ ದಿನಾಂಕ ಫೆಬ್ರವರಿ ಕೊನೆಯಲ್ಲಿ ಕೋಡ್ ಅಫ್ ಕಂಡೆಕ್ಟ್ ಜಾರಿ ಆಗಬಹುದು. ಕೋಡ್ ಅಫ್ ಕಂಡೆಕ್ಟ್ ಬಂದರೆ ಮಂತ್ರಿ ಆಗಿ ಏನು ಮಾಡಲಿ. ಮಂತ್ರಿ ಆಗ್ತೀನಿ ಎನ್ನುವ ಚರ್ಚೆಯೇ ಅನಾವಶ್ಯಕ. ಅಲ್ಲದೇ ಕಾಂಗ್ರೆಸ್ ‌ದುರಹಂಕಾರ ಕಡಿಮೆ ಮಾಡಬೇಕು ಎಂದು ಹೇಳಿದರು.

 

By admin

Leave a Reply

Your email address will not be published. Required fields are marked *

Verified by MonsterInsights