Wednesday, April 30, 2025
24.6 C
Bengaluru
LIVE
ಮನೆರಾಜಕೀಯಹಿರಿಯ ಮುತ್ಸದ್ದಿ ವಿ.ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ

ಹಿರಿಯ ಮುತ್ಸದ್ದಿ ವಿ.ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ

ಚಾಮರಾಜನಗರ : ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ಬಿಜೆಪಿ ಸಂಸದ, ಹಿರಿಯ ಮುತ್ಸದ್ದಿ ರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾದ್ ಮಾರ್ಚ್ 17ಕ್ಕೆ ರಾಜಕೀಯ ನಿವೃತ್ತಿ ಘೋಷಿಸಲಿದ್ದಾರೆ.

ಈ ಕುರಿತು ಚಾಮರಾಜನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಮ್ಮ ಸುಧೀರ್ಘ ರಾಜಕೀಯ ಜೀವನದ ಏಳು ಬೀಳುಗಳನ್ನು ಹಂಚಿಕೊಂಡಿದ್ದಾರೆ. ಈ ಬಾರಿಯ ಸಂಸತ್ ಅವಧಿ ಮುಗಿಯುತ್ತಾ ಬಂದಿದೆ. ನನ್ನ ರಾಜಕೀಯ 1974 ಮಾರ್ಚ್ ನಲ್ಲಿ ಮೈಸೂರಿನಿಂದ ಆರಂಭವಾಯಿತು. ನನ್ನ ರಾಜಕೀಯ ಜೀವನ ಮಾರ್ಚ್ 17ಕ್ಕೆ 50 ವರ್ಷ ಪೂರ್ಣಗೊಳ್ಳಲಿದ್ದು, ನನ್ನ ರಾಜಕೀಯದ ಸುವರ್ಣ ಮಹೋತ್ಸವ ಮಾರ್ಚ್ 17ರಂದು ಮೈಸೂರಿನ ಸೆನೆಟ್ ಭವನದಲ್ಲಿ ನಡೆಯಲಿದೆ ಎಂದರು.

ನನ್ನ ರಾಜಕೀಯ ಜೀವನದಲ್ಲಿ 14 ಚುನಾವಣೆಗಳನ್ನು ಎದುರಿಸಿದ್ದೇನೆ. 6 ಬಾರಿ ಕೇಂದ್ರ ಹಾಗೂ 3 ಬಾರಿ ರಾಜ್ಯ ರಾಜಕೀಯದಲ್ಲಿ ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ನನ್ನ ರಾಜಕೀಯ ಜೀವನದ ಚುನಾವಣೆ ಜರ್ನಿ ಹೇಗಿತ್ತು ಎಂಬ ಬಗ್ಗೆ ಪುಸ್ತಕ ಬಿಡುಗಡೆ ಮಾಡುತ್ತೇನೆ. ಸುಧೀರ್ಘ ಕಾಲ ನಾನು ಚಾಮರಾಜನಗರ ಕ್ಷೇತ್ರವನ್ನು ಪ್ರತಿನಿಧಿಸಿದ್ದೇನೆ. ನಾನು ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಹೇಗೆಲ್ಲಾ ಆಗಿದೆ ಎಂಬ ಬಗ್ಗೆ ನನಗೆ ಸಂತೃಪ್ತಿ ಇದೆ. ನಾನು ರಾಜೀವ್ ಗಾಂಧಿಯವರಿಂದ ಆರಂಭವಾಗಿ ಮೋದಿಯವರ ಅವಧಿವರೆಗೂ ಸೇವೆ ಸಲ್ಲಿಸಿದ್ದೇನೆ ಎಂದರು.

ನನ್ನ ರಾಜಕೀಯ ಜೀವನದ ಸೇವೆ ತೃಪ್ತಿ ತಂದಿದೆ. ಸೋತು ನಿವೃತ್ತಿ ಆಗುವುದು ಬೇಡ ಎಂಬ ಕಾರಣಕ್ಕೆ ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಆದರೆ ನನಗೆ ವಯಸ್ಸಾಗಿದೆ, ಆರೋಗ್ಯದ ಕಾರಣದಿಂದ ಪಾರ್ಲಿಮೆಂಟ್ ನಲ್ಲಿ ಸರಿಯಾಗಿ ಭಾಗವಹಿಸಲು ಆಗಲಿಲ್ಲ ಎಂಬ ನೋವಿದೆ. ಹೀಗಾಗಿ ನನ್ನ ಆರೋಗ್ಯದ ದೃಷ್ಟಿಯಿಂದ ನಾನು ಈ ಬಾರಿ ರಾಜಕೀಯ ನಿವೃತ್ತಿ ಘೋಷಣೆ ಮಾಡಲಿದ್ದೇನೆ. ಅದರ ಜೊತೆಗೆ ಚುನಾವಣೆ ರಾಜಕೀಯದಿಂದಲೂ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಹೇಳಿದರು.

ಚಾಮರಾಜನಗರ ಕ್ಷೇತ್ರದಿಂದ ತಾವು ತಮ್ಮ ಅಳಿಯಂದಿರಲ್ಲಿ ಯಾರನ್ನಾದರೂ ಉತ್ತರಾಧಿಕಾರಿಯಾಗಿ ಘೋಷಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿ. ಶ್ರೀನಿವಾಸ್ ಪ್ರಸಾದ್, ನನ್ನ ಇಬ್ಬರು ಅಳಿಯಂದಿರೂ ಪರಸ್ಪರ ಹೊಂದಾಣಿಕೆ ಹೊಂದಿದ್ದಾರೆ. ಮುಂಬರುವ ಎಂಪಿ ಚುನಾವಣೆಗೆ ಇಬ್ಬರೂ ಆಕಾಂಕ್ಷಿಗಳಾಗಿದ್ದಾರೆ. ಆದರೆ ಅವರಿಗೆ ಸಲಹೆ ಸೂಚನೆ ಕೊಟ್ಟಿದ್ದೇನೆ ಹೊರತು ಅವರ ಪರವಾಗಿ ಹೈಕಮಾಂಡ್ ಗೆ ಶಿಫಾರಸು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿ ಕೇಂದ್ರ ಚುನಾವಣೆ ಸಮಿತಿ ಟಿಕೆಟ್ ನೀಡುವ ಅಭ್ಯರ್ಥಿಗೆ ಬೆಂಬಲಿಸುವಂತೆ ಹೇಳಿದ್ದೇನೆ. ನನ್ನ ವೈಯುಕ್ತಿಕ ಶಿಫಾರಸು ಯಾರ ಪರವಾಗಿಯೂ ಇಲ್ಲ. ಒಂದು ವೇಳೆ ಹೈಕಮಾಂಡ್ ನನ್ನ ಅಭಿಪ್ರಾಯ ಕೇಳಿದರೆ ನನ್ನ ನಿಲುವು ಹೇಳುತ್ತೇನೆ. ಆದರೆ ನನ್ನ ಅಭಿಪ್ರಾಯವನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ನನ್ನ ಅಳಿಯಂದಿರ ವೈಯುಕ್ತಿಕ ಅಭಿಪ್ರಾಯ ಎಂದರು.

ಹೊರ ಜಿಲ್ಲೆಯವರೆಂಬ ಕಾರಣಕ್ಕೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವಿ.ಸೋಮಣ್ಣಗೆ ಗೋ ಬ್ಯಾಕ್ ಎಂದು ಹೇಳಿದ್ದರಲ್ಲ ಎಂಬ ಪತ್ರಕರ್ತರ ಪ್ರಶ್ನೆ ಉತ್ತರಿಸಿದ ಶ್ರೀನಿವಾಸ್ ಪ್ರಸಾದ್, ಚಾಮರಾಜನಗರದಲ್ಲಿ ಸ್ಪರ್ಧಿಸದಂತೆ ನಾನೇ ಸಲಹೆ ನೀಡಿದ್ದೆ. ಆದರೆ ಚುನಾವಣೆಯಲ್ಲಿ ಅವರ ಪರ ಕೆಲಸ ಮಾಡಿದ್ದೇನೆ. ಚಾಮರಾಜನಗರದ ಮುನಿಸಿಪಲ್ ಬಗ್ಗೆಯೂ ಜ್ಞಾನವಿಲ್ಲದವರು ಸ್ಪರ್ಧೆ ಮಾಡುವುದು ಎಷ್ಟು ಸರಿ? ಎಂದು ದ್ವಂದ್ವ ನಿಲುವು ವ್ಯಕ್ತಪಡಿಸಿದರಲ್ಲದೇ, ಈ ಬಾರಿ ಬಿಜೆಪಿ ಗೆಲುವಿಗೆ ಒಳ್ಳೆಯ ಅವಕಾಶವಿದೆ. ಯಾವ ಅಭ್ಯರ್ಥಿ ಸ್ಪರ್ಧಿಸುತ್ತಾರೆ ಎಂಬುದರ ಮೇಲೆ ಗೆಲುವು ನಿರ್ಣಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments