ಮೈಸೂರು: ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಪರಸ್ಪರ ಆರೋಪ ಪ್ರತ್ಯಾರೋಪಗಳು ಜೋರಾಗುತ್ತಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ ತೆರಿಗೆ ಪರಿಹಾರ ಮೊತ್ತವನ್ನು ಸರಿಯಾಗಿ ವಿತರಿಸಿಲ್ಲ ಎಂದು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಆದಿಯಾಗಿ ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರದ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಕೇಂದ್ರದ ಮುಂದೆ ರಾಜ್ಯದ ನಾಯಕರ ಆರೋಪ ದೂಷಣೆ ಇನ್ನೂ ಕಡಿಮೆಯಾಗಿಲ್ಲ.
ಇಂದು ಮೈಸೂರು ಜಿಲ್ಲೆಗೆ ಕೇಂದ್ರ ಗೃಹ ಸಚಿವು ಅಮಿತ್ ಶಾ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಮೈಸೂರು ಕಾಂಗ್ರೆಸ್ ಘಟಕದಿಂದ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗಿದೆ. ಮೈಸೂರು ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ನೇತೃತ್ವದಲ್ಲಿ “ನನ್ನ ತೆರಿಗೆ ನನ್ನ ಹಕ್ಕು” ಘೋಷಣೆಯೊಂದಿಗೆ “ಬರದಿಂದ ನಲುಗುತ್ತಿರುವ ನಾಡಿಗೆ ಬರಿಗೈಯಲ್ಲಿ ಬಂದಿರಾ?” ಎಂಬ ಪ್ರಶ್ನೆಯೊಂದಿಗೆ ಪೋಸ್ಟರ್ ಅಭಿಯಾನ ನಡೆಸಲು ಕಾರ್ಯಕರ್ತರು ಸಜ್ಜಾಗಿದ್ದಾರೆ.