ತೃಣಮೂಲ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆ ಹಿನ್ನೆಲೆ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.. ಇದರಲ್ಲಿ ಹೂಗ್ಲಿ ಲೋಕಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡೋಕೆ ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ ನಟಿಗೆ ಟಿಕೆಟ್ ನೀಡಲಾಗಿದೆ. ಟಿಎಂಸಿ ಘೋಷಿಸಿದ ಪಟ್ಟಿಯಲ್ಲಿ ರಚನಾ ಬ್ಯಾನರ್ಜಿಗೂ ಟಿಕೆಟ್ ಘೋಷಿಸಲಾಗಿದೆ. ಇವರು ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ಎರಡು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.
ನಟಿ, ಉದ್ಯಮಿ, ದೂರದರ್ಶನ ನಿರೂಪಕಿ, ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಟಿಸಿರುವ ರಚನಾ ಬ್ಯಾನರ್ಜಿಗೆ ತೃಣಮೂಲ ಕಾಂಗ್ರೆಸ್, ಹೂಗ್ಲಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದೆ. ಇವರ ಜೊತೆಗೆ ಸಿನಿಮಾ ನಟ ಶತ್ರುಘ್ನ ಸಿನ್ಹಾ, ಕ್ರಿಕೆಟರ್ ಯೂಸುಫ್ ಪಠಾಣ್ ಮತ್ತು ಕೀರ್ತಿ ಆಜಾದಿಗೂ ಟಿಎಂಸಿ ಟಿಕೆಟ್ ನೀಡಿದೆ. ಟಿಎಂಸಿ ಟಿಕೆಟ್ ಪಡೆದಿರುವ ರಚನಾ ಬ್ಯಾನರ್ಜಿ, ಮೇ 2000ರಲ್ಲಿ ಬಿಡುಗಡೆಯಾದ ’ಪ್ರೀತ್ಸು ತಪ್ಪೇನಿಲ್ಲ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ವಿ.ಎಸ್ ರೆಡ್ಡಿ ನಿರ್ದೇಶಿಸಿದ ಮತ್ತು ಜಿವಿಜಿ ರಾಜು ನಿರ್ಮಿಸಿದ ಈ ಚಿತ್ರದಲ್ಲಿ ರವಿಚಂದ್ರನ್, ರಚನಾ ಬ್ಯಾನರ್ಜಿ, ಸುಮನ್ ನಗರ್ಕರ್, ಶ್ರೀನಿವಾಸಮೂರ್ತಿ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದರು.
ಇದಾದ ನಂತರ, ಏಪ್ರಿಲ್ 2001ರಲ್ಲಿ ಬಿಡುಗಡೆಯಾದ ’ಉಸಿರೆ’ ಎನ್ನುವ ಚಿತ್ರದಲ್ಲೂ ರಚನಾ ಬ್ಯಾನರ್ಜಿ ನಾಯಕಿಯಾಗಿ ನಟಿಸಿದ್ದರು. ಪ್ರಭು ಸೊಲೊಮನ್ ನಿರ್ದೇಶಿಸಿದ್ದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ರವಿಚಂದ್ರನ್, ರಚನಾ, ಪ್ರಕಾಶ್ ರಾಜ್, ಸಾಧು ಕೋಕಿಲಾ, ದೊಡ್ಡಣ್ಣ ಮುಂತಾದವರಿದ್ದರು.
ಕೋಲ್ಕತ್ತಾದಲ್ಲಿ ಜನಿಸಿದ ರಚನಾ ಬ್ಯಾನರ್ಜಿಗೆ ಹೂಗ್ಲಿ ಕ್ಷೇತ್ರದ ಟಿಕೆಟ್ ಅನ್ನು ನೀಡಲಾಗಿದೆ. 2009 ಮತ್ತು 2014ರಲ್ಲಿ ಈ ಕ್ಷೇತ್ರದಲ್ಲಿ ಟಿಎಂಸಿಯ ರತನ್ ದೇ ಗೆದ್ದಿದ್ದರೆ, 2019ರ ಚುನಾವಣೆಯಲ್ಲಿ ಬಿಜೆಪಿಯ ಲಾಕೆಟ್ ಚಟರ್ಜಿ ಗೆಲುವು ಸಾಧಿಸಿದ್ದರು. ಈ ಬಾರಿ, ಬಿಜೆಪಿ ಲಾಕೆಟ್ ಚಟರ್ಜಿಗೆ ಟಿಕೆಟ್ ಅನ್ನು ನೀಡಿದೆ. ರಚನಾ ಅವರು ಈ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾರಾ ಎಂದು ಕಾದು ನೋಡಬೇಕಿದೆ.