ಮಂಡ್ಯ: ಕೇಂದ್ರದ ಆಯುಷ್ ಮಂತ್ರಾಲಯದ ಸಹಯೋಗದಲ್ಲಿ ನಾಗಮಂಗಲದ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲಾಗಿರುವ ಕೇಂದ್ರಿಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆಯನ್ನು ಕೇಂದ್ರ ಆಯುಷ್ ಸಚಿವ ಡಾ. ಮುಂಜಪರ ಮಹೇಂದ್ರಬಾಯ್ ಕಲುಬಾಯ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವ ಎನ್ ಚಲುವರಾಯಸ್ವಾಮಿ, ಸರ್ಕಾರಗಳು ಸಾರ್ವಜನಿಕರಿಗೆ ಅವಶ್ಯಕತೆ ಇರುವ ಯೋಜನೆಯನ್ನೇ ಜಾರಿಗೆ ತರುತ್ತವೆ. ಆ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು.
ನಾನು ಆರೋಗ್ಯ ಸಚಿವನಾಗಿದ್ದಾಗ ಈ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿತ್ತು, ಇದೀಗ ನಾನು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತೋಷದಾಯಕ ವಿಷಯವಾಗಿದೆ ಎಂದರು.
ದಕ್ಷಿಣ ಭಾರತದಲ್ಲೇ ಈ ಯೋಜನೆ ನಾಗಮಂಗಲದಲ್ಲಿ ಮೊದಲು ಪ್ರಾರಂಭವಾಗುತ್ತಿರುವುದು ಹೆಮ್ಮೆ ತಂದಿದೆ. ಕೇಂದ್ರದ ಈ ಯೋಜನೆ ನಮ್ಮ ಭಾಗದ ಜನರು ಉಪಯೋಗಿಸಿಕೊಳ್ಳಬೇಕು. ಇಂದಿನ ಮಾನವನ ದೇಹ ಮೊದಲಿನಂತಿಲ್ಲ. ಆಗಾಗಿ ಇಂತಹ ಪ್ರಕೃತಿ ಚಿಕಿತ್ಸೆಗೆ ಹೋಗುವುದು ಅನಿವಾರ್ಯವಾಗಿದೆ. ಸಾವಿರಾರು ವರ್ಷದಿಂದ ಗಿಡ ಮೂಲಿಕೆಗಳಿಂದಲೇ ನಮ್ಮ ಪೂರ್ವಜರು ಆರೋಗ್ಯ ವೃದ್ಧಿಸಿಕೊಳ್ಳುತ್ತಿದ್ದರು. ಪೂರ್ವಜರ ಪದ್ಧತಿಯನ್ನೇ ಅಳವಡಿಸಿಕೊಳ್ಳುವುದು ಇಂದಿನ ಅನಿವಾರ್ಯವಾಗಿದೆ ಎಂದರು.
ಯೋಗ ಕೇಂದ್ರವು ಅತ್ಯಂತ ಸುಸಜ್ಜಿತವಾಗಿದ್ದು, 200 ಹಾಸಿಗೆ ಸಾಮ್ಮರ್ಥ ಹೊಂದಿರುವ ಕಟ್ಟಡವಾಗಿದೆ. ಸಾಮಾನ್ಯ ಕೊಠಡಿ, ಡಿಲಕ್ಸ್ ವಾರ್ಡ್, ಸ್ಪೆಷಲ್ ವಾರ್ಡ್, ಪ್ರತ್ಯೇಕ ಪುರುಷ ಮತ್ತು ಮಹಿಳಾ ಚಿಕಿತ್ಸಾ ಕೊಠಡಿಗಳೊಂದಿಗೆ ಬೃಹತ್ ಯೋಗ ಸಭಾಂಗಣ, ಆಹಾರ ಚಿಕಿತ್ಸಾ ಕೇಂದ್ರ, ಪ್ರಯೋಗಾಲಯ ಹೊಂದಿದೆ. ಮುಂದಿನ ದಿನಗಳಲ್ಲಿ ಇಲ್ಲಿಯೇ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಸ್ಥಾಪಿಸಲು ಚಿಂತಿಸಲಾಗುತ್ತಿದೆ ಎಂದರು.
ಸಂಸದೆ ಸುಮಲತಾ ಅಂಬರೀಶ್, ಮಾತನಾಡಿ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಉದ್ಘಾಟನೆಯಲ್ಲಿ ಭಾಗಿಯಾಗಿರುವುದು ಸಂತೋಷದಯಾಕವಾಗಿದೆ ಎಂದರು.
ವಿಶ್ವದ ಯೋಗಗುರುವಾದ ಭಾರತ ದೇಶವು ವಿಶ್ವಕ್ಕೆ ಯೋಗ ಹಾಗೂ ಪ್ರಕೃತಿಯ ಬಗ್ಗೆ ತನ್ನದೇ ಆದ ಕೊಡುಗೆ ನೀಡಿದೆ. ದಕ್ಷಿಣ ಭಾರತದಲ್ಲೆ ಅತಿದೊಡ್ಡ ಚಿಕಿತ್ಸಾ ಯೋಗ ಕೇಂದ್ರದ ಉದ್ಘಾಟನೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಈ ಚಿಕಿತ್ಸಾ ಕೇಂದ್ರಕ್ಕೆ ಕೇಂದ್ರದಿಂದ 60 ಕೋಟಿಯನ್ನು ಸಹಾಯಧನ ನೀಡಿದೆ. ಜೊತೆಗೆ ರಾಜ್ಯ ಸರ್ಕಾರವು ಕೂಡ ಹಂತ ಹಂತವಾಗಿ ಕೈಜೋಡಿಸಿ ಸಹಕರಿಸಿದೆ ಎಂದರು.
ಇಂಗ್ಲೀಷ್ ಚಿಕಿತ್ಸೆಯನ್ನು ಎಷ್ಟೇ ತೆಗೆದುಕೊಂಡರು ಸಹ ಅದರಿಂದ ತೊಂದರೆಗಳೆ ಹೆಚ್ಚು. ಆಗಾಗಿ ಇಂತಹ ಯೋಗ ಚಿಕಿತ್ಸಾ ಕೇಂದ್ರವು ಮನುಷ್ಯನ ಯಾವುದೇ ತರಹದ ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಆಯುಷ್ ಇಲಾಖೆಯ ನಿರ್ದೇಶಕ ಡಾ.ರಾಘವೇಂದ್ರರಾವ್, ಉಪ ನಿರ್ದೇಶಕ ಸತ್ಯಜಿತ್ ಪೌಲ್, ಸಲಹೆಗಾರರಾದ ಡಾ.ಎಂ.ಎ ಖಾಸ್ಮಿ, ರಾಜ್ಯ ಆಯುಷ್ ಇಲಾಖೆಯ ಆಯುಕ್ತ ಶ್ರೀನಿವಾಸುಲು, ಎಸ್.ವಿ.ವೈ.ಎ.ಎಸ್.ಎ ವಿಶ್ವವಿದ್ಯಾಲಯದ ಕುಲಪತಿ ಡಾ.ಹೆಚ್ ಆರ್ ನಾಗೇಂದ್ರ, ಜಿಲ್ಲಾಧಿಕಾರಿ ಡಾ.ಕುಮಾರ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.