ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸೀಟು ಗೆಲ್ಲಲೇಬೇಕು ಎಂದು ಕಾಂಗ್ರೆಸ್ ಹೈಕಮಾಂಡ್
ರಾಜ್ಯ ನಾಯಕರಿಗೆ ಟಾಸ್ಕ್ ನೀಡಿದೆ. ಅದರಲ್ಲೂ ಮಂತ್ರಿಗಳು, ನಿಗಮ ಮಂಡಳಿ ಅಧ್ಯಕ್ಷರು ಮತ್ತು ಶಾಸಕರುಗಳಿಗೆ, ಅಭ್ಯರ್ಥಿಗಳನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರಲೇಬೇಕೆಂದು ಸ್ಪಷ್ಪ ಸಂದೇಶ ನೀಡಿದೆ. ಕರ್ನಾಟಕದಲ್ಲಿ ಜಾರಿಯಾದ ಗ್ಯಾರಂಟಿ ಯೋಜನೆಗಳು ದೇಶದಲ್ಲಿ ಭಾರೀ ಸದ್ದು ಮಾಡಿದ್ದು, ಕರ್ನಾಟಕದಿಂದಲೇ ರಾಷ್ಟ್ರ ರಾಜಕಾರಣಕ್ಕೆ ಸಂದೇಶ ನೀಡಲು ಹೊರಟಿರುವ ಹೈಕಮಾಂಡ್ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಪ್ರದರ್ಶನ ತೋರಲು ಸೂಚನೆ ನೀಡಿದೆ. ಇನ್ನು ಮಂತ್ರಿಗಳು, ಶಾಸಕರು, ನಿಗಮ ಮಂಡಳಿ ಅಧ್ಯಕ್ಷರುಗಳಿಗೆ ಟಾರ್ಗೆಟ್ ಫಿಕ್ಸ್ ಮಾಡಲು ಕಾರಣವೂ ಇದೆ.
ಚುನಾವಣೆ ಅಂದರೆ ಸುಮ್ನೆ ಅಲ್ಲ. ಅಲ್ಲಿ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತೆ. ಆದರೆ ಕಾಂಗ್ರೆಸ್ ಪರಿಸ್ಥಿತಿ ಇದೀಗ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ ಅಕೌಂಟ್ಗಳು ಫ್ರೀಜ್ ಆಗಿವೆ. ಹೀಗಾಗಿ ರಾಹುಲ್ ಗಾಂಧಿ ಹೇಳಿದಂತೆ ಕಾಂಗ್ರೆಸ್ ಪಕ್ಷಕ್ಕೆ ಟ್ರೈನ್ ಟಿಕೆಟ್ ತಗೊಳೋಕೂ ದುಡ್ಡಿಲ್ಲ. ಹಾಗಾದ್ರೆ ಬಿಜೆಪಿಯನ್ನುಈ ಚುನಾವಣೆಯಲ್ಲಿ ಮಣಿಸೋದು ಹೇಗೆ, ಅಭ್ಯರ್ಥಿಗಳನ್ನು ಗೆಲ್ಲಿಸೋದು ಹೇಗೆ ಎಂದು ತಲೆ ಕೆಡಿಸಿಕೊಂಡ ದೆಹಲಿ ನಾಯಕರು ಇದಕ್ಕೆ ಹುಡುಕಿದ ಹೊಸ ಉಪಾಯವೇ ಇದು.
ಕರ್ನಾಟಕದಲ್ಲಿ ಹೇಗಿದ್ರೂ ಕಾಂಗ್ರೆಸ್ ಸರ್ಕಾರ ಇದೆ. ಅನೇಕರಿಗೆ ಮಂತ್ರಿ ಸ್ಥಾನ ನೀಡಿದ್ದೇವೆ. ಶಾಸಕರಿಗೆ ನಿಗಮ ಮಂಡಳಿನೂ ಕೊಟ್ಟಿದ್ದೇವೆ. ಹೀಗಾಗಿ ಅಭ್ಯರ್ಥಿಗಳ, ಪಕ್ಷದ ಚುನಾವಣಾ ಖರ್ಚು, ವೆಚ್ಚ ಅವರೇ ನೋಡಿಕೊಳ್ಳಲಿ ಎಂದು ಸಂದೇಶ ರವಾನಿಸಿದೆ. ಇದೇ ಕಾರಣಕ್ಕೆ ಆರಂಭದಲ್ಲಿ ಸಚಿವರನ್ನೇ ಚುನಾವಣಾ ಅಖಾಡಕ್ಕಿಳಿಸಲು ಹೈಕಮಾಂಡ್ ಪ್ಲ್ಯಾನ್ ಮಾಡಿತ್ತು. ಆದರೆ ತಮ್ಮ ಸಚಿವಗಿರಿ ಎಲ್ಲಿ ಕಳೆದುಕೊಳ್ಳಬೇಕಾಗುತ್ತೋ ಎಂದು ಹಲವರು ಹಿಂದೇಟು ಹಾಕಿದರು. ಹೀಗಾಗಿ ಬೇರೆಯವರಿಗೆ ಟಿಕೆಟ್ ನೀಡುವುದಕ್ಕಿಂತ ಸಚಿವರ ಕುಟುಂಬದವರಿಗೆ ಟಿಕೆಟ್ ಕೊಟ್ರೆ ಚುನಾವಣೆಯಲ್ಲಿ ತಮ್ಮ ಕಮಿಟ್ಮೆಂಟ್ ತೋರ್ಸ್ತಾರೆ. ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರ್ತಾರೆ ಅಂತ ಹೈಕಮಾಂಡ್ ಪ್ಲ್ಯಾನ್ ಮಾಡಿತ್ತು.
ಇನ್ನು ಜಿಲ್ಲೆಯ ಶಾಸಕರ ಅಭಿಪ್ರಾಯ ಕೇಳಿದ್ದು ಕೂಡಾ ಇದೇ ಕಾರಣಕ್ಕೆ. ಯಾವ ಶಾಸಕರು, ಯಾರಿಗೆ ಬೆಂಬಲ ಕೊಡ್ತಾರೋ, ಯಾರ ಪರ ಲಾಭಿ ಮಾಡ್ತಾರೋ ಅವರಿಗೆ ಟಿಕೆಟ್ ಕೊಟ್ಟು ನೀವೇ ಗೆಲ್ಲಿಸಿಕೊಂಡು ಬನ್ನಿ ಎಂದು ಬಿಗ್ ಟಾಸ್ಕ್ ಕೊಟ್ಟಿದೆ. ಒಂದು ವೇಳೆ 20 ಸೀಟುಗಳಿಗಿಂತ ಕಡಿಮೆ ಬಂದ್ರೆ, ಕಡಿಮೆ ಲೀಡ್ ಬಂದ್ರೆ , ಸಚಿವರು, ನಿಗಮ ಮಂಡಳಿಗಳ ಅಧ್ಯಕ್ಷರ ಫರ್ಫಾಮೆನ್ಸ್ ಸರಿ ಇಲ್ಲ ಅಂತಾ ಅವರನ್ನು ಕುರ್ಚಿಯಿಂದ ಕೆಳಗಿಳಿಸುವ ಎಚ್ಚರಿಕೆ ರವಾನೆಯಾಗಿದೆ. ಹೈಕಮಾಂಡ್ ಕೊಟ್ಟ ಸವಾಲನ್ನು ಅನಿವಾರ್ಯವಾಗಿ ಸ್ವೀಕರಿಸಿರುವ ರಾಜ್ಯ ಮಂತ್ರಿ ಮಹೋದಯರು, ವಿಧಿಯಿಲ್ಲದೇ ಚುನಾವಣಾ ರಣ ಕಣದಲ್ಲಿ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದಾರೆ ಎನ್ನಲಾಗಿದೆ.