ಪುತ್ರನಿಗೆ ಟಿಕೆಟ್ ನೀಡದ ವಿಚಾರವಾಗಿ ಬಂಡಾಯವೆದ್ದಿರುವ ಕೆಎಸ್ ಈಶ್ವರಪ್ಪ ಮತ್ತೆ ಯಡಿಯೂರಪ್ಪ ಕುಟುಂಬದ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಲೋಕಸಭೆ ಚುನಾವಣಾ ಪ್ರಚಾರದ ಸಂದರ್ಭ ಪ್ರಧಾನಮಂತ್ರಿ ಮೋದಿಯವರ ಫೋಟೋ ಬಳಸುವ ವಿಚಾರ ವಿವಾದಕ್ಕೀಡಾಗಿದ್ದು, ಇದೀಗ ಈಶ್ವರಪ್ಪ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈಶ್ವರಪ್ಪ ಪ್ರಚಾರದ ವೇಳೆ ಮೋದಿ ಭಾವಚಿತ್ರ ಬಳಸಿದ್ದಕ್ಕೆ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ವ್ಯಂಗ್ಯವಾಡಿದ್ದರು.
ಈ ಹಿನ್ನೆಲೆಯಲ್ಲಿ ರಾಘವೇಂದ್ರ ಅವರಿಗೆ ತಿರುಗೇಟು ನೀಡಿದ್ದ ಈಶ್ವರಪ್ಪ, ಮೋದಿ ಅವರಪ್ಪನ ಆಸ್ತಿಯೇ, ಮೋದಿ ಭಾವಚಿತ್ರವನ್ನು ಯಾರಾದರೂ ಬಳಸಬಹುದು ಎಂದು ಹೇಳಿದ್ದರು. ಇದೀಗ ಮೋದಿ ಫೋಟೋ ಬಳಕೆಗಾಗಿ ಕೋರ್ಟ್ ಮೊರೆಹೋಗಿದ್ದಾರೆ. ಶುಕ್ರವಾರ ಕೆವಿಯಟ್ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪುತ್ರ ಕಾಂತೇಶ್‌ಗೆ ಹಾವೇರಿ ಬಿಜೆಪಿ ಟಿಕೆಟ್ ನೀಡದ್ದರಿಂದ ಬಂಡಾಯವೆದ್ದಿರುವ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಬಿವೈ ರಾಘವೇಂದ್ರ ಎದುರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಪ್ರಚಾರದಲ್ಲಿ ಬಿಜೆಪಿ ಚಿಹ್ನೆ ಹೊರತುಪಡಿಸಿ ಮೋದಿ ಭಾವಚಿತ್ರವನ್ನು ಈಶ್ವರಪ್ಪ ಬಳಸುತ್ತಿದ್ದಾರೆ.ಹಾಗಾಗಿ ವವರು ಮೋದಿ ಚಿತ್ರ ಬಳಸಬಾರದು ಎಂದು ಈಶ್ವರಪ್ಪ ವಿರುದ್ಧ ವ್ಯಂಗ್ಯವಾಗಿ ಮಾತನಾಡಿರುವ ಬಿವೈ ರಾಘವೇಂದ್ರ ವಿರುದ್ಧ ಈಗ ಈಶ್ವರಪ್ಪ ಬಣ ಕೆಂಡವಾಗಿದ್ದಾರೆ.