ಚಿಕ್ಕಮಗಳೂರು: ಮಾಜಿ ಸಿಎಂ ಕುಮಾರಸ್ವಾಮಿಯವರು ಮತ್ತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇಂದು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಹೆಚ್‌ಡಿಕೆ ಗ್ಯಾರಂಟಿ ನೋಡಿಕೊಳ್ಳೋದಕ್ಕೆ ಓರ್ವ ಅಧ್ಯಕ್ಷ ನೇಮಕ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 16 ಕೋಟಿ ಹಣ ಬೇಕಂತೆ. ಗ್ಯಾರಂಟಿ ಯೋಜನೆಗೆ ಐವರು ಉಪಾಧ್ಯಕ್ಷರು ಯಾಕೆ ಬೇಕು? ಕಾಂಗ್ರೆಸ್ ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಸಿದ್ದು ಸರ್ಕಾರದಲ್ಲಿ ಜಾತಿಗೊಂದು ಡಿಸಿಎಂ ಸ್ಥಾನ ಕೊಟ್ಟುಬಿಡಿ. 30-35 ಶಾಸಕರಿಗೆ ಡಿಸಿಎಂ ಸ್ಥಾನ ಕೊಡುವುದು ಒಳ್ಳೆಯದು. ಆಗ ಪ್ರತಿನಿತ್ಯ ಡಿಸಿಎಂ ಸ್ಥಾನದ ಬೇಡಿಕೆ ಬಗ್ಗೆ ಗೊಂದಲ ಇರಲ್ಲ ಎಂದು ಲೇವಡಿ ಮಾಡಿದ್ದಾರೆ.
ಕಳೆದ ಬಾರಿಯ ಲೋಕಸಭೆ ಚುನಾವಣೆ ಬೇರೆ, ಈ ಚುನಾವಣೆ ಬೇರೆ. ಇವತ್ತು ಓರ್ವ ಸಾಮಾನ್ಯ ಕಾರ್ಯಕರ್ತನ ನಿಲ್ಲಿಸಿದರೂ ಮಂಡ್ಯದಲ್ಲಿ ಗೆಲ್ಲಲಿದ್ದಾರೆ. ಕಳೆದ ಬಾರಿ ಎಲ್ಲರೂ ಪಕ್ಷೇತರ ಅಭ್ಯರ್ಥಿಯ ಪರ ಮತ ಹಾಕಿದರು. ರೈತರು, ಬಿಜೆಪಿ, ಕಾಂಗ್ರೆಸ್ಸಿಗರು ಪಕ್ಷೇತರ ಅಭ್ಯರ್ಥಿ ಪರ ಮತ ಹಾಕಿದ್ದರು. ಜೆಡಿಎಸ್ ಬಿಟ್ಟು ಶೇ 2ರಿಂದ 3 ರಷ್ಟು ಮತದಾರರು ಮಾತ್ರ ನಮ್ಮ ಪರ ಇದ್ದರು. ಈಗ ಮಂಡ್ಯ ಕ್ಷೇತ್ರದಲ್ಲಿ ಆ ವಾತಾವರಣ ಇಲ್ಲ ಎಂದು ಅವರು ಹೇಳಿದ್ದಾರೆ.