ಹುಬ್ಬಳ್ಳಿ; ಹಳೇ ಹುಬ್ಬಳ್ಳಿ ಗಲಭೆಯ ಆರೋಪಿಗಳ ಮೇಲೆ ಕಾಂಗ್ರೆಸ್ ಗೆ ಮೊದಲಿನಿಂದಲೂ ಸಿಂಪತಿ ಇತ್ತು. ಹಾಗಾಗಿ ಅವರ ಬಿಡುಗಡೆಗೆ ಸಹಕರಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಹೈಕೋರ್ಟ್ 111 ಜನ ಆರೋಪಿಗಳಿಗೆ ಜಾಮೀನು ನೀಡಿದ್ದು, ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯೇ ಕಾರಣ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಸರ್ಕಾರ ಸರಿಯಾದ ವಾದ ಮಂಡಿಸದೇ ಇರುವುದೇ ಹೈಕೋರ್ಟ್ ಜಾಮೀನು ನೀಡಲು ಕಾರಣವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಬಿಡುಗಡೆಗೆ ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ಆರೋಪಿಗಳ ಬಿಡುಗಡೆಗಾಗಿ ಲೆಟರ್ ಕೊಡುವುದು, ಒತ್ತಾಯ ಮಾಡುವುದು ನಡದೇ ಇತ್ತು ಎಂದು ಜೋಶಿ ಹೇಳಿದ್ದಾರೆ.
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಮೇಲೆ ದೇಶ ದ್ರೋಹದ ಆರೋಪಗಳಿದ್ದವು. ಇಂಥವರನ್ನು ಕಾಂಗ್ರೆಸ್ ಸರ್ಕಾರ, ಸರಿಯಾಗಿ ವಾದ ಮಂಡಿಸದೆ ಬಿಡುಗಡೆಗೊಳಿಸಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಸರ್ಕಾರ ಅನುಭವಿಸಲಿದೆ ಎಂದು ಸಚಿವ ಪ್ರಹ್ಲಾದ ಜೋಶಿ ಎಚ್ಚರಿಸಿದ್ದಾರೆ.
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಕಲ್ಲು ತೂರಾಟ ಮಾಡಿ ಪೊಲೀಸ್ ವಾಹನಗಳು ಜಖಂ ಗೊಳಿಸಿ, ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿಗೊಳಿಸಿದ್ದರು. ಹೀಗಿದ್ದರೂ ಕಾಂಗ್ರೆಸ್ ಸರ್ಕಾರ ಇವರ ಬಿಡುಗಡೆಗೆ ಸಹಕರಿಸಿದೆ ಎಂದು ಸಚಿವ ಜೋಶಿ ಆರೋಪಿಸಿದ್ದಾರೆ.