ಹುಬ್ಬಳ್ಳಿ; ತೀವ್ರ ಕುತೂಹಲ ಮೂಡಿಸಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಕೊನೆಗೂ ತೆರೆ ಬಿದ್ದಿದೆ. ಇಂದು ಬಿಜೆಪಿ ಹೈಕಮಾಂಡ್ ಎರಡನೇ ಪಟ್ಟಿ ಬಿಡುಗಡೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ 5ನೇ ಬಾರಿ ಜೋಶಿ ಸ್ಪರ್ಧೆಗೆ ಅಸ್ತು ಎಂದು ಟಿಕೆಟ್ ಘೋಷಣೆ ಮಾಡಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಗೆದ್ದಿರೋ ಪ್ರಹ್ಲಾದ್ ಜೋಶಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಹಾವೇರಿ ಅಥವಾ ಧಾರವಾಡ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದ್ದಲ್ಲಿ ಸ್ಪರ್ಧೆಗೆ ನಾನು ಸಿದ್ದ ಎಂದು ಶೆಟ್ಟರ್‌ರವರು ಬಿಜೆಪಿಗೆ ಘರ್ ವಾಪ್ಸಿ ಬಳಿಕ ಹೇಳುತ್ತಲೇ ಬಂದಿದ್ದರು. ಆದರೆ ಈಗ ಅಳೆದು ತೂಗಿ ಶೆಟ್ಟರ್‌ರವರಿಗೆ ಎರಡು ಕ್ಷೇತ್ರದಿಂದ ಕೈ ಬಿಟ್ಟಿದ್ದು, ಧಾರವಾಡ ಕ್ಷೇತ್ರದಿಂದ ಮತ್ತೊಮ್ಮೆ ಜೋಶಿಯವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.
ಧಾರವಾಡ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ರವರಿಗೆ ಎರಡು ಕ್ಷೇತ್ರದ ಟಿಕೆಟ್ ಈಗ ಕೈ ತಪ್ಪಿದ್ದು, ಜಗದೀಶ್ ಶೆಟ್ಟರ್ ನಡೆ ಈಗ ತೀವ್ರ ಕುತೂಹಲ ಮೂಡಿಸಿದೆ. ಹಲವು ಬಾರಿ ದೆಹಲಿ ಹೋಗಿ ಬಂದಿದ್ದ ಶೆಟ್ಟರ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾತನಾಡಿದರು. ಆದರೆ ಬಿಜೆಪಿ ಹೈಕಮಾಂಡ್ ಈಗ ಶೆಟ್ಟರ್ ಹೆಸರನ್ನು ಕೈ ಬಿಟ್ಟು, ಬೇರೆಯವರಿಗೆ ಮಣೆ ಹಾಕಿದೆ. ಆದರೆ ಬೆಳಗಾವಿ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ಘೋಷಣೆ ಆಗದೆ ಇರುವುದು ಈಗ ಶೆಟ್ಟರ್ ನಡೆ ಬೆಳಗಾವಿ ಕಡೆ ಅನ್ನು ಮಾತುಗಳು ಈಗ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಒಟ್ಟಿನಲ್ಲಿ ಕಳೆದ 2004ರಿಂದ 2019ರ ಲೋಕ ಸಭಾ ಚುನಾವಣೆಯಲ್ಲಿ ಸತತವಾಗಿ ನಾಲ್ಕು ಬಾರಿ ಪ್ರಹ್ಲಾದ್ ಜೋಶಿಯವರು ಗೆದ್ದು ಬರುತ್ತಿದ್ದು, 5ನೇ ಬಾರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಐದನೇ ಬಾರಿ ಇಲ್ಲಿಯವರೆಗೂ ಯಾರು ಗೆದ್ದು ಬಂದಿಲ್ಲ, ಆದರೆ ಜೋಶಿಯವರು ಗೆದ್ದು ಇತಿಹಾಸ ನಿರ್ಮಿಸುತ್ತಾರ ಎನ್ನುವುದು ವಿಶೇಷವಾಗಿದೆ.